ಚಿತ್ರದುರ್ಗ: ಇಲ್ಲಿನ ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವತೆಯ 2018 ನೇ ಸಾಲಿನ ಜಾತ್ರಾ ಮಹೋತ್ಸವವೂ ಏ. 6 ರವರೆಗೆ ನಡೆಯಲಿದೆ. ಮಾ. 23 ರಂದು ರಾತ್ರಿ 8 ಕ್ಕೆ ದೇವತೆಗೆ ಕಂಕಣಧಾರಣೆ ಹಾಗೂ ಮಧುವಣಗಿತ್ತಿ ಪೂಜಾ ಕಾರ್ಯಕ್ರಮ ನಡೆಸಲಾಯಿತು.

ಮಾ. 27 ರಂದು ರಾತ್ರಿ 8 ಕ್ಕೆ ಬರಗೇರಮ್ಮ ದೇವತೆಯನ್ನು ಬುರುಜನಹಟ್ಟಿಯ ದೇಗುಲದಿಂದ ಊರ ಹೊರಗಿನ ದೇಗುಲಕ್ಕೆ ಕರೆದುಕೊಂಡು ಹೋಗುವುದು. ನಂತರ ಕರಿಯಟ್ಟಿಯಲ್ಲಿನ ಭಕ್ತರಿಂದ ಪೂಜೆ ಸ್ವೀಕಾರ.
ಮಾ. 28 ರಂದು ಬೆಳಿಗ್ಗೆ 9 ಕ್ಕೆ ಚಂದ್ರವಳ್ಳಿಯಲ್ಲಿ ದೇವತೆಯ ಗಂಗಾಪೂಜೆ, ಕುಂಭಾಭಿಷೇಕ ನಂತರ ದೇಗುಲಕ್ಕೆ ಕರೆತರಲಾಗುವುದು. ಅನ್ನಸಂತರ್ಪಣೆ ನಂತರ ರಾತ್ರಿ ಈರಜ್ಜನಹಟ್ಟಿ ಹಾಗೂ ನಾಯಕರ ಸೊಲ್ಲಾಪುರದಲ್ಲಿ ಭಕ್ತಾದಿಗಳಿಂದ ಪೂಜೆ ಸ್ವೀಕಾರ.

ಮಾ. 29 ರಂದು ದೇವತೆಯು ನಾಯಕರ ಸೊಲ್ಲಾಪುರದಿಂದ ಹೊರಟು ಕೆಳಗಿನ ಸೊಲ್ಲಾಪುರ, ಗೊಲ್ಲರಹಟ್ಟಿ, ಟಗರನಹಟ್ಟಿ, ದೇವರಹಟ್ಟಿ, ಜಾಲಿಕಟ್ಟೆ ಮತ್ತು ಮಾಳಪ್ಪನಹಟ್ಟಿ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ದೇಗುಲಕ್ಕೆ ಮರಳುವುದು. ಅಂದು ಬೆಳಿಗ್ಗೆ 7 ಕ್ಕೆ ಪಿಳ್ಳೇಕೆರನಹಳ್ಳಿ, ಮೆದೇಹಳ್ಳಿ ರಸ್ತೆ, ಬಿವಿಕೆಎಸ್ ಲೇ ಔಟ್, ಚೇಳುಗುಡ್ಡ, ನೆಹರು ನಗರ, ಪಿ ಅಂಡ್ ಟಿ ಕ್ವಾಟ್ರರ್ಸ್, ಜ್ಞಾನಭಾರತಿ ಹಿಂಭಾಗದ ಭಕ್ತಾದಿಗಳ ಮನೆಗಳಲ್ಲಿ ಪೂಜೆ ಸ್ವೀಕಾರ.

ಮಾ. 30 ರಂದು ದೇವತೆಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ಬೆಳಿಗ್ಗೆ 9.30 ರಿಂದ ಸಂಜೆವರೆಗೂ ಸಕಲ ವಾದ್ಯಗಳೊಡನೆ ನಗರದ ರಾಜ ಬೀದಿಗಳಲ್ಲಿ `ರಥೋತ್ಸವ’ ಭಕ್ತರಿಂದ ಮೀಸಲು ಅರ್ಪಣೆ, ಹರಕೆ ಸಲ್ಲಿಕೆ. ಅಂದು ಬೆಳಿಗ್ಗೆ 11 ರಿಂದ ಅಗಸನಕಲ್ಲು, ರೈಲ್ವೆ ಸ್ಟೇಷನ್ ಬಡಾವಣೆಗಳ ಭಕ್ತಾದಿಗಳ ಮನೆಯಲ್ಲಿ ಪೂಜೆ ಸ್ವೀಕಾರ. ಸಂಜೆ 5.30 ಕ್ಕೆ ಬಾರ್‍ಲೈನ್, ತಿಪ್ಪಜ್ಜಿ ಸರ್ಕಲ್, ಮುನ್ಸಿಪಲ್ ಕಾಲೊನಿ, ಚರ್ಚ್ ಬಡಾವಣೆ, ಕೆಳಗೋಟೆ ಪ್ರದೇಶದ ಭಕ್ತಾದಿಗಳ ಮನೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ದೇಗುಲಕ್ಕೆ ಮರಳುವುದು.

ಮಾ. 31 ರಂದು ಬೆಳಿಗ್ಗೆ 8 ಕ್ಕೆ ದೇಗುಲದಿಂದ ಹೊರಟು ದರ್ಜಿ ಕಾಲೊನಿ, ಗೋಪಾಲಪುರ, ಜೆಸಿಆರ್ ಹಾಗೂ ವಿ.ಪಿ. ಬಡಾವಣೆಗಳ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ. ಸಂಜೆ 6.30 ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವತೆಯ `ಸಿಡಿ ಉತ್ಸವ’ ಜರುಗಲಿದೆ.

ಏ. 1 ರಂದು ಅಗಸನಕಲ್ಲು, ರೈಲ್ವೆ ನಿಲ್ದಾಣ, ಗಾರೆಹಟ್ಟಿ, ಕವಾಡಿಗರಹಟ್ಟಿ, ಮಠದ ಕುರುಬರಹಟ್ಟಿ, ಕೋಡನಹಟ್ಟಿ, ಕರ್?ಲಹಟ್ಟಿಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

ಏ. 2 ರಂದು ದೇವತೆಗೆ ಬೆಳಿಗ್ಗೆ 8 ಕ್ಕೆ ವಿಶೇಷ `ಭಂಡಾರದ ಪೂಜೆ’ ನಂತರ ಗಾವಿನ ಸೇವೆ, ರಾತ್ರಿ 8 ಕ್ಕೆ ಓಕಳಿ ಸೇವೆ, ಬುರುಜನಹಟ್ಟಿ ಪ್ರವೇಶದ ನಂತರ ಅಲ್ಲಿನ ಭಕ್ತಾದಿಗಳ ಮನೆಯಲ್ಲಿ ಪೂಜೆ ಸ್ವೀಕಾರ.

ಏ. 4 ರಂದು ಸುಣ್ಣಗಾರಹಟ್ಟಿ, ಕೋಳಿ ಬುರುಜನಹಟ್ಟಿ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ ಸೇರಿದಂತೆ ಸುತ್ತಮುತ್ತ ಭಕ್ತಾದಿಗಳ ಮನೆಯಲ್ಲಿ ಪೂಜೆ ಸ್ವೀಕಾರ. ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಯ ನಂತರ ಗುಡಿದುಂಬುವ ಕಾರ್ಯಕ್ರಮದ ಮೂಲಕ ದೇವತೆ ಸ್ವಸ್ಥಾನ ಸೇರಲಿದೆ.

ಏ. 6 ರ ಸಂಜೆ ಕಂಕಣ ವಿಸರ್ಜನೆ, ಜೋಗೂಟದೊಂದಿಗೆ ಜಾತ್ರೆ ಮುಕ್ತಾಯ ಆಗಲಿದೆ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ್, ಕಂದಾಯಾಧಿಕಾರಿ ಎಚ್.ಕೆ.ಪ್ರಾಣೇಶ್, ದೇಗುಲದ ಪ್ರಧಾನ ಅರ್ಚಕ ಪೂಜಾರ್ ಕಸ್ತೂರಪ್ಪ ತಿಳಿಸಿದ್ದಾರೆ.

ಏ. 3 ಕ್ಕೆ ಐತಿಹಾಸಿಕ ಅಕ್ಕತಂಗಿ ಭೇಟಿ
ಏ. 3 ರಂದು ಚಿಕ್ಕಪೇಟೆ, ಐಯ್ಯಣ್ಣನಪೇಟೆ, ದೊಡ್ಡಪೇಟೆ, ಉತ್ಸವಾಂಬ ದೇಗುಲದ ಅಕ್ಕಪಕ್ಕ, ಕರುವಿನಕಟ್ಟೆ ವೃತ್ತ, ಬುರುಜನಹಟ್ಟಿ ರಸ್ತೆಯಲ್ಲಿನ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ಒಳಗಿನ ದೇಗುಲಕ್ಕೆ ಆಗಮನ. ನಂತರ ರಾತ್ರಿ 8 ಕ್ಕೆ ವಿಶೇಷ ಪುಷ್ಪಾಲಂಕಾರದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಐತಿಹಾಸಿಕ `ಅಕ್ಕ ಬರಗೇರಮ್ಮ, ತಂಗಿ ತಿಪ್ಪಿನಘಟ್ಟಮ್ಮ ದೇವತೆಗಳ ಐತಿಹಾಸಿಕ ಭೇಟಿ ಉತ್ಸವ’ ಜರುಗಲಿದೆ ಎಂದು ಅರ್ಚಕರು ತಿಳಿಸಿದ್ದಾರೆ.