ಚಿತ್ರದುರ್ಗ: ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಎಷ್ಟೆ ಸ್ಕೀಂಗಳನ್ನು ಜಾರಿಗೆ ತಂದರೂ ಏನು ಪ್ರಯೋಜನವಿಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್.ವೇಣುಗೋಪಾಲ್ ತಾಲೂಕು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ೨೦೧೮-೧೯ ನೇ ಸಾಲಿನ ಮೊದಲನೇ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷೆ ವಿರುದ್ದ ಸಿಡಿಮಿಡಿಗೊಂಡರು. ಆಸ್ಪತ್ರೆಯಲ್ಲಿ ಪೀಠೋಪಕರಣಗಳ ಖರೀಧಿಯಲ್ಲಿ ಭಾರಿ ಹಗರಣವಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದ್ದಾರೆ ಎಂದು ಸದಸ್ಯ ಸುರೇಶ್ ಆಕ್ಷೇಪಿಸಿದಾಗ ತಾ.ಪಂ.ಸಮಿತಿ ರಚಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸೋಣ ಎಂದು ಅಧ್ಯಕ್ಷ ವೇಣುಗೋಪಾಲ್ ಸದಸ್ಯರುಗಳನ್ನು ಸಮಾಧಾನಪಡಿಸಿದರು.
ಬಸ್ ಚಾರ್ಜ್ ಕೂಡ ಇಲ್ಲದೆ ಆಸ್ಪತ್ರೆಗೆ ಬರುವ ಪರಿಸ್ಥಿತಿಯಲ್ಲಿ ನೂರಾರು ರೋಗಿಗಳಿದ್ದಾರೆ. ಆರೋಗ್ಯ ಕರ್ನಾಟಕವಲ್ಲ. ಎಷ್ಟೆ ಸ್ಕೀಂಗಳನ್ನು ಸರ್ಕಾರ ಜಾರಿಗೆ ತಂದರೂ ಅದು ನಿಜವಾಗಿ ಬಡವರಿಗೆ ತಲುಪಿದಾಗ ಮಾತ್ರ ಸರ್ಕಾರದ ಹೊಸ ಹೊಸ ಯೋಜನೆಗಳು ಯಶಸ್ವಿಯಾಗಲಿದೆ. ಇದಕ್ಕೆ ಅಧಿಕಾರಿಗಳು ನಿಷ್ಟೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಆಪರೇಷನ್‌ಗೆ ಬಡ ರೋಗಿಗಳಿಂದ ಎಂಟರಿಂದ ಹತ್ತು ಸಾವಿರ ರೂ.ಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಸಂಬಂಧ ಹಲವಾರು ಬಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಹಾಗೂ ಆರ್.ಎಂ.ಓ.ಇವರುಗಳಿಗೆ ದೂರು ನೀಡಿದರೂ ಯಾವ ಪ್ರಯೋಜನವಾಗಿಲ್ಲ. ಸರ್ಕಾರಿ ಆಸ್ಪತ್ರೆಗಳ ಪಾಡೆ ಹೀಗಾದರೆ ಇನ್ನು ಬಡಪಾಯಿಗಳು ಎಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಸದಸ್ಯ ಏರುಧ್ವನಿಯಲ್ಲಿ ಖಂಡಿಸಿದಾಗ ಇತರೆ ಸದಸ್ಯರುಗಳು ಧ್ವನಿಗೂಡಿಸಿದರು.
ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ ಯೋಜನೆಯಡಿ ಏಳು ವಿವಿಧ ಸ್ಕೀಂಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಬಿ.ಪಿ.ಎಲ್.ರೇಷನ್ ಕಾರ್ಡ್ ಬೇಕೆ ಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಸಭೆಗೆ ತಿಳಿಸಿದಾಗ ಬಹಳಷ್ಟು ಬಡವರ ಬಳಿ ಇನ್ನು ರೇಷನ್ ಕಾರ್ಡೆ ಇಲ್ಲ. ಅಂತಹವರ ಗತಿ ಏನು ಎಂದು ಸದಸ್ಯ ಚಂದ್ರಕಲಾ ಸರ್ಕಾರ ಜಾರಿಗೆ ತರುವುದೆಲ್ಲ ಇಂತಹ ಅವೈಜ್ಞಾನಿಕ ಯೋಜನೆಗಳೆ ಎಂದು ತೀವ್ರವಾಗಿ ವಿರೋಧಿಸಿದರು.
ತುರುವನೂರು ಹೋಬಳಿ ಬೆಳಗಟ್ಟ, ಕೂನುಬೇವು ಪಂಚಾಯಿತಿಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಪರಿಹರಿಸಿ ಎಂದು ಅಧ್ಯಕ್ಷ ವೇಣುಗೋಪಾಲ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಿ ಕುಡಿಯುವ ನೀರಿಗೆ ಭೀಕರ ಅಭಾವವಿದೆಯೋ ಅಂತಹ ಸ್ಥಳಗಳಲ್ಲಿ ಪಾಯಿಂಟ್ ಮಾಡಿ ಬೋರ್‌ವೆಲ್‌ಗಳನ್ನು ಕೊರೆಸಿ ತಾಲೂಕಿನ ೩೮ ಪಂಚಾಯಿತಿಗೆ ಒಬ್ಬ ಅಧಿಕಾರಿಯನ್ನು ನೇಮಿಸಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಅಂಗನವಾಡಿ ಮಕ್ಕಳಿಗೆ ಸರಿಯಾದ ಸೌಕರ್ಯವಿಲ್ಲ. ನೆಲದ ಮೇಲೆ ಕೂರಿಸುತ್ತಾರೆ. ಸೂಪರ್‌ವೈಸರ್‌ಗಳು ಯಾವಾಗ ಭೇಟಿ ನೀಡುತ್ತಾರೋ ಗೊತ್ತಿಲ್ಲ ಎಂದು ಕೆಲವು ಸದಸ್ಯರುಗಳು ಸಭೆಗೆ ದೂರಿದಾಗ ಸೋಮಾರಿ ಸೂಪರ್‌ವೈಸರ್‌ಗಳಿಗೆ ನೋಟಿಸ್ ನೀಡಿದ್ದೇನೆ ಎಂದು ಭರಮಸಾಗರ ಸಿ.ಡಿ.ಪಿ.ಓ. ಸಮಜಾಯಿಷಿ ನೀಡಿದ್ದಕ್ಕೆ ತೃಪ್ತಿಪಟ್ಟುಕೊಳ್ಳದ ಅಧ್ಯಕ್ಷ ಆರ್.ಎನ್.ವೇಣುಗೋಪಾಲ್ ನೋಟಿಸ್ ನೀಡಿದರೆ ಪ್ರಯೋಜನವಿಲ್ಲ. ಶಿಸ್ತು ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದರು.
ಅಂಗನವಾಡಿ ಕೇಂದ್ರಗಳಿರುವುದು ಮಕ್ಕಳಿಗೆ ಉಣ್ಣಿಸಿ ಮಲಗಿಸುವುದಕ್ಕಷ್ಟೆ ಅಲ್ಲ. ಅಕ್ಷರ ಕಲಿಸುವುದು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಎಂಬುದನ್ನು ಮರೆತಂತಿದೆ. ಸರ್ಕಾರಿ ಕೆಲಸ ಮಾಡುವ ನಿಮಗೆ ಸರ್ಕಾರ ಸಂಬಳ ಕೊಡುವುದಿಲ್ಲವೆ. ಅದಕ್ಕಾಗಿಯಾದರು ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸದಸ್ಯೆ ಚಂದ್ರಕಲಾ ತಿಳಿಸಿದರು.
ಜಿ.ಆರ್.ಹಳ್ಳಿ ಪಂಚಾಯಿತಿ ಆಯಿತೋಳು ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ಆರ್.ಓ.ಪ್ಲಾಂಟ್‌ಗಳು ಕೆಟ್ಟು ನಿಂತಿವೆ. ಸರಿಯಾದ ನಿರ್ವಹಣೆ ಇಲ್ಲ. ಎರಡು ವರ್ಷವಾಯಿತು ಮುದ್ದಾಪುರದಲ್ಲಿ ವಿದ್ಯುತ್ ಕಂಬ ಕೇಳಿ ಹೀಗೆ ಸಮಸ್ಯೆಗಳ ಬುತ್ತಿಯನ್ನೇ ಅನೇಕ ಸದಸ್ಯರುಗಳು ಸಭೆಯಲ್ಲಿ ಬಿಚ್ಚಿಟ್ಟರು.
ಪಿ.ಡಿ.ಓ.ಗಳು ಯಾರ ಮಾತು ಕೇಳುತ್ತಿಲ್ಲ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ನೀರು ಕರೆಂಟ್ ಇಲ್ಲ. ಜನರಿಗೆ ಏನು ಜವಾಬು ಹೇಳಬೇಕು ಎಂಬುದೇ ನಮಗೆ ಹೊಳೆಯುತ್ತಿಲ್ಲ. ಸಾಮಾನ್ಯ ಜನರಿಗೆ ಅನ್ಯಾಯವಾಗಿದೆ. ಹೀಗಾದರೆ ನಮಗೆ ಮತ ಹಾಕಿ ಗೆಲ್ಲಿಸಿದವರಿಗೆ ನ್ಯಾಯ ಕೊಡುವುದು ಹೇಗೆ ಎಂದು ಅನೇಕ ಸದಸ್ಯರುಗಳು ಸಭೆಯಲ್ಲಿ ಪ್ರಶ್ನಿಸಿದಾಗ ತಾಲೂಕು ಪಂಚಾಯಿತಿಯ ಎಲ್ಲಾ ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿಯೇ ಜು.೫ ನೇ ತಾರೀಖು ಸಭೆ ಕರೆಯೋಣ ಎಂದು ಅಧ್ಯಕ್ಷರು ಸದಸ್ಯರುಗಳನ್ನು ಸಮಾಧಾನಪಡಿಸಿದರು.
ಎನ್.ಆರ್.ಇ.ಜಿ.ಯಲ್ಲಿ ಬಡವರಿಗೆ ಕೂಲಿ ಕೆಲಸ ಸಿಗುತ್ತಿಲ್ಲ. ಗುತ್ತಿಗೆದಾರರು ನೇರವಾಗಿ ಕೆಲಸ ಮಾಡಿ ಶೇ.೪೦ ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. ತಾಲೂಕು ಪಂಚಾಯಿತಿಯಲ್ಲಿ ಹಳೆ ಜೀಪು ಕಾಣೆಯಾಗಿದೆ ಟೆಂಡರ್ ಕರೆದು ಮಾರಾಟ ಮಾಡಲಾಗಿದೆಯೇ ಎಂಬುದು ನಮಗೆ ತಿಳಿಯಬೇಕು ಎಂದು ಕೆಲವು ಸದಸ್ಯರು ಪಟ್ಟು ಹಿಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಜನವರಿಯಿಂದ ಜೂ.೨೧ ರವರೆಗೆ ೧೫೦.೫ ಮೀ.ಮೀಟರ್ ಮಳೆ ಬರಬೇಕಿತ್ತು. ಆದರೆ ೨೬೦.೮ ಮಿ.ಮೀ.ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಕಳೆದ ಹದಿನೈದು ದಿನಗಳಿಂದ ಮಳೆ ಇಲ್ಲದೆ ಬಿತ್ತಿರುವ ಬೀಜಗಳು ತಾಲೂಕಿನ ಕೆಲವು ಕಡೆ ಮೊಳಕೆಯೊಡೆದಿಲ್ಲ. ಎಲ್ಲಾ ಬೆಳೆ ಬಾಡುವ ಸಾಧ್ಯತೆ ಇದೆ ಎಂದು ಸಭೆಯ ಗಮನ ಸೆಳೆದರು. ಜೂ.ನಲ್ಲಿ ಶೇ.೬೮ ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದೆ. ಬಿತ್ತನೆ ಆಗುತ್ತಿಲ್ಲ. ೨೦೧೫-೧೬ ನೇ ಸಾಲಿನ ಬೆಳೆ ವಿಮೆ ಮಾಹಿತಿ ಇನ್ನು ಸಿಕ್ಕಿಲ್ಲ. ತಾಲೂಕಿನಲ್ಲಿ ೬೪೮೩೦ ಎಕರೆಯಲ್ಲಿ ಬಿತ್ತನೆ ಆಗಬೇಕಿತ್ತು. ಅದಕ್ಕೆ ಬದಲಾಗಿ ೯೬೬೧೦ ಎಕರೆಯಲ್ಲಿ ಬಿತ್ತನೆಯಾಗಿದೆ. ಆದರೂ ಬೆಳೆ ಬಾಡುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದಾಗ ಬಂಗಾರ ಅಡವಿಟ್ಟು ರೈತರು ಹೊಲದಲ್ಲಿ ಬಿತ್ತುವ ಪರಿಸ್ಥಿತಿ ಇದೆ ಎಂದು ರೈತರು ಅನುಭವಿಸುತ್ತಿರುವ ಸಂಕಟವನ್ನು ಅಧ್ಯಕ್ಷ ಆರ್.ಎನ್.ವೇಣುಗೋಪಾಲ್ ಸಭೆಗೆ ತಿಳಿಸಿದರು.
ಬೀಜ, ಗೊಬ್ಬರ ಸ್ಟಾಕ್ ಇದೆ. ರೈತರಿಗೆ ಯಾವ ತೊಂದರೆಯಿಲ್ಲ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಿಸಿದ ೨೬೦ ಶೇಂಗಾ ಬೀಜದ ಮಿನಿ ಕಿಟ್ ಬಂದಿದೆ. ಇದು ಹೊಸ ತಳಿ ಯಾವ ರೈತ ಹೆಚ್ಚು ಬೆಳೆಯುತ್ತಾನೋ ಅಂತಹ ರೈತರನ್ನು ಗುರುತಿಸಿದರೆ ಉಚಿತವಾಗಿ ನೀಡಲಾಗುವುದು. ಅಧಿಕಾರಿಗಳೊಂದಿಗೆ ಸದಸ್ಯರು ಕೈಜೋಡಿಸಿ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶೋಭನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಣ್ಣ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪತಿ, ಹನುಮಂತಪ್ಪ ಸಭೆಯ ವೇದಿಕೆಯಲ್ಲಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.