ಚಿತ್ರದುರ್ಗ: ವಕೀಲರ ಮನೆಬಾಗಿಲಿಗೆ ಕಲ್ಯಾಣ ನಿಧಿಯನ್ನು ತೆಗೆದುಕೊಂಡು ಹೋಗಬೇಕಾಗಿರುವುದರಿಂದ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುತ್ತೇನೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ನೇಮಕಗೊಂಡಿರುವ ರಾಜಣ್ಣ ಮಾಡನಾಯಕನಹಳ್ಳಿ ಇವರು ವಕೀಲರುಗಳಿಗೆ ಭರವಸೆ ನೀಡಿದರು.
ಶನಿವಾರ ಲಾ ಬಾರ್ ಅಸೋಸಿಯೇಷನ್‌ಗೆ ಭೇಟಿ ನೀಡಿ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ ಈ ಬಾರಿ ಸುಲಭವಾಗಿರಲಿಲ್ಲ. ಕಠಿಣವಾಗಿತ್ತು. ಆದರೆ ಜಿಲ್ಲೆಯ ವಕೀಲರ ಹಾಗೂ ಹಿರಿಯರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ನನಗೆ ಓಟು ಹಾಕಿದ ನಿಮ್ಮ ಘನತೆ ಗೌರವಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. ವಕೀಲರ ಕಲ್ಯಾಣ ನಿಧಿ ಹಾಗೂ ಸ್ಟಾಂಪಿಂಗ್ ಸಮಸ್ಯೆ ನಿವಾರಣೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಹೈಕೋರ್ಟ್‌ನಲ್ಲಿ ಆಗುವ ಕೆಲಸಗಳು ಏನಾದರೂ ಇದ್ದರೆ ಮಾಡಿಸಿಕೊಡುತ್ತೇನೆ. ಈ ಬಾರಿಯ ಬಜೆಟ್‌ನಲ್ಲಿ ಐದು ಕೋಟಿ ರೂ.ಬಂದಿದೆ. ಇನ್ನು ಮುಂದೆ ಯಾವುದಾದರೂ ಸರ್ಕಾರ ಅಧಿಕಾರಕ್ಕೆ ಬರಲಿ ವರ್ಷಕ್ಕೆ ಹತ್ತು ಕೋಟಿ ಅನುದಾನ ಕೊಡಿ ಅದರ ಜೊತೆ ಸಂಘ ಹಾಗೂ ಪರಿಷತ್‌ನಿಂದ ಹತ್ತು ಕೋಟಿ ರೂ. ಸಂಗ್ರಹಿಸಿ ಕಷ್ಟದಲ್ಲಿರುವ ವಕೀಲರ ನೆರವಿಗೆ ಬಳಸುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.
ಯಾರಾದರೂ ವಕೀಲರು ನಿಧನರಾದರೆ ಅವರ ಕುಟುಂಬಕ್ಕೆ ಸಂಘದಿಂದ ಪರಿಹಾರ ನೀಡಲು ಆಗುತ್ತಿಲ್ಲದಿರುವುದು ನೋವಿನ ಸಂಗತಿ. ಮುಂದೆ ಆಕಸ್ಮಿಕವಾಗಿ ಯಾರಾದರೂ ನಿಧನರಾದಾಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರ ಹೆಸರಿಗೆ ಚೆಕ್ ಕಳಿಸುತ್ತೇವೆ. ಅವರ ಮೂಲಕ ಮೃತರ ಕುಟುಂಬಗಳಿಗೆ ತಲುಪುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು.
ವೈದ್ಯಕೀಯ ವೆಚ್ಚ, ಅಪಘಾತ ಪರಿಹಾರಗಳು ವಕೀಲರುಗಳಿಗೆ ಸಿಗುತ್ತಿಲ್ಲ. ನ್ಯಾಯಾಧೀಶರುಗಳಾಗಿ ಆಯ್ಕೆಯಾಗಲು ವಕೀಲರುಗಳಿಗೆ ತರಬೇತಿ ಅತ್ಯವಶ್ಯಕವಾಗಿದೆ. ಹಾಗಾಗಿ ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಕೊಡಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಸಂವಾದ ನಡೆಸಿ ವಕೀಲರುಗಳಿಗಿರುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್, ಉಪಾಧ್ಯಕ್ಷ ವೀರಭದ್ರಪ್ಪ, ಹಿರಿಯ ವಕೀಲರುಗಳಾದ ಚಲ್ಮೇಶ್, ಆರ್.ಉದಯಶಂಕರ್, ಶಿವಣ್ಣರೆಡ್ಡಿ, ಪ್ರತಾಪ್‌ಜೋಗಿ, ಅಶೋಕ್‌ಬೆಳಗಟ್ಟ, ಹೆಚ್.ಎನ್.ರಾಮಚಂದ್ರಪ್ಪ, ಇರ್ಫಾನುಲ್ಲಾ ಸೇರಿದಂತೆ ಅನೇಕ ವಕೀಲರು ಈ ಸಂದರ್ಭದಲ್ಲಿ ಹಾಜರಿದ್ದರು.