ಚಿತ್ರದುರ್ಗ: ಸಂವಿಧಾನದಡಿ ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಮನವಿ ಮಾಡಿದರು.

ಹೂವು-ಹಣ್ಣು-ತರಕಾರಿ ಮಾರಾಟಗಾರರ ಹಮಾಲರ ಸಂಘ ಹಾಗೂ ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ ಕುರಿತು ಗಾಂಧಿವೃತ್ತದ ಸಮೀಪವಿರುವ ತರಕಾರಿ ಮಾರುಕಟ್ಟೆಯಲ್ಲಿ ಹಮಾಲರಿಗೆ ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನದ ಮಹತ್ವ ಇ.ವಿ.ಎಂ/ವಿ.ವಿ.ಪ್ಯಾಟ್ ಬಳಕೆ ಕುರಿತು ಅರಿವು ಮೂಡಿಸುವ ಮತದಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡವ-ಶ್ರೀಮಂತ ಎನ್ನುವ ಯಾವುದೇ ತಾರತಮ್ಯವಿಲ್ಲದೆ ಸಂವಿಧಾನದಲ್ಲಿ ಎಲ್ಲಿರಿಗೂ ಒಂದೆ ಒಂದು ಮತದಾನ ಮಾಡುವ ಹಕ್ಕು ನೀಡಲಾಗಿದೆ. ಪ್ರಜಾಪ್ರಭುತ್ವದ ಆಶಯಗಳು ಯಶಸ್ವಿಯಾಗಬೇಕಾದರೆ ಶೇ.100 ಕ್ಕೆ ನೂರರಷ್ಟು ಮತದಾನವಾಗಬೇಕು. ಇದೇ ತಿಂಗಳ ಹದಿನೆಂಟರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯನ್ನು ಯಾರು ನಿರ್ಲಕ್ಷಿಸಬೇಡಿ. ಹಮಾಲರು ತಪ್ಪದೆ ಮತದಾನ ಮಾಡಿ ಅಲಸ್ಯೆ ಮಾಡಿ ಮತದಾನದಿಂದ ವಂಚಿತರಾಗಬೇಡಿ ಎಂದು ಜಾಗೃತಿಗೊಳಿಸಿದರು.

ಇ.ವಿ.ಎಂ. ಹಾಗೂ ವಿವಿಪ್ಯಾಟ್ ಬಗ್ಗೆ ಮತದಾರರಲ್ಲಿ ಯಾವುದೇ ಗೊಂದಲ ಬೇಡ. ಒಬ್ಬ ಅಭ್ಯರ್ಥಿಗೆ ಹಾಕುವ ಮತ್ತ ಮತ್ಯಾರಿಗೋ ಹೋಗಬಹುದು ಎನ್ನುವ ತಪ್ಪು ಕಲ್ಪನೆ ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ಚುನಾವಣಾ ಆಯೋಗ ಎಲ್ಲವನ್ನು ಸರಿಯಾಗಿ ಪರಿಶೀಲಿಸಿಯೇ ಇ.ವಿ.ಎಂ.ಗಳನ್ನು ಸಿದ್ದಪಡಿಸಿರುತ್ತಾರೆ. ಮುಂದುವರೆದ ಅಮೇರಿಕಾ ದೇಶ ಇನ್ನು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‍ಗಳನ್ನು ಬಳಸುತ್ತಿದೆ. ಹಾಗಾಗಿ ಭಾರತ ಅಮೇರಿಕನ್ನರಿಗಿಂತ ಬುದ್ದಿವಂತ ದೇಶ ಎಂದು ಹೇಳಿದರು.
ಮಾನವ ಹಕ್ಕುಗಳ ಹೋರಾಟಗಾರ ದಾದಾಪೀರ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನಿಮ್ಮ ಅಮೂಲ್ಯವಾದ ಮತಗಳನ್ನು ಅರ್ಹರಿಗೆ ಹಾಕಿದಾಗ ದೇಶ ಅಭಿವೃದ್ದಿಯತ್ತ ಸಾಗಲು ಸಾಧ್ಯ. ಮತದಾನದಂದು ತಪ್ಪದೆ ಮತಗಟ್ಟೆಗಳಿಗೆ ಹೋಗಿ ನಿಮ್ಮ ಹಕ್ಕು ಚಲಾಯಿಸಿ ಎಂದು ಹೂವು-ಹಣ್ಣು-ತರಕಾರಿ ಮಾರಾಟಗಾರರ ಹಮಾಲರಲ್ಲಿ ವಿನಂತಿಸಿದರು.

ಹೂವು-ಹಣ್ಣು-ತರಕಾರಿ ಹಮಾಲರ ಮಾರಾಟಗಾರರ ಸಂಘದ ಅಧ್ಯಕ್ಷ ಫರ್ವಿಜ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಚಂದ್ರಪ್ಪ ಕಾಲ್ಕೆರೆ, ಎಂ.ಆರ್.ಷಡಾಕ್ಷರಿ, ನವೀನ್, ಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.