ಚಿತ್ರದುರ್ಗ: ಪ್ರತಿಭಾ ಪುರಸ್ಕಾರದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯೆ ಜಯಮ್ಮಬಾಲರಾಜ್ ಹೇಳಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದಿಂದ ೨೦೧೭-೧೮ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಕ್ರೀಡಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್‌ಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಇಲ್ಲವೆಂದರೆ ಸಮಾಜದಲ್ಲಿ ಅವಮಾನ ಅನುಭವಿಸಬೇಕಾಗುತ್ತದೆ. ಎಲ್ಲಿಯೂ ಗೌರವ ಸಿಗುವುದಿಲ್ಲ. ಗೊಲ್ಲ ಸಮಾಜದ ಮಹಿಳೆಯರು ಅಬಲೆಯರಲ್ಲ. ಮನೆಯಲ್ಲಿ ಪ್ರೋತ್ಸಾಹ ನೀಡದೆ ನಾಲ್ಕು ಗೋಡೆಗಳ ನಡುವೆ ಇಡಲಾಗಿದೆ. ಆದ್ದರಿಂದ ವಿಶೇಷವಾಗಿ ಬಾಲಕಿಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಶಿಕ್ಷಣದಿಂದ ಮಾತ್ರ ಸದೃಢ ಸಮಾಜ ಕಟ್ಟಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಬಹುದು ಎಂದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿಯೂ ಗೊಲ್ಲ ಸಮಾಜ ಮುಂದೆ ಬರಬೇಕು. ಎಷ್ಟೆ ದೊಡ್ಡ ವ್ಯಕ್ತಿಯಾಗಿರಲಿ, ಪ್ರತಿಭಾವಂತರಾಗಿರಲಿ ಶಿಕ್ಷಣದ ಜೊತೆ ಹಣಕ್ಕೂ ಪ್ರಾಮುಖ್ಯತೆ ಕೊಡಬೇಕು. ಹೋರಾಟದಲ್ಲಿಯೂ ನಮ್ಮ ಜನಾಂಗ ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದ ಜಯಮ್ಮ ಬಾಲರಾಜ್ ನಾನು ಅಪ್ಪಟ ಗೃಹಿಣಿಯಾಗಿದ್ದವಳು ವಿಧಾನಪರಿಷತ್ ಸದಸ್ಯೆಯಾಗಿ ನನ್ನನ್ನು ನೇಮಕ ಮಾಡುವ ಮೂಲಕ ಹಿಂದಿನ ಕಾಂಗ್ರೆಸ್ ಸರ್ಕಾರ ಗೊಲ್ಲ ಸಮುದಾಯವನ್ನು ಗುರುತಿಸಿದೆ ಎಂದು ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಮರ್ಪಿಸಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಸಿ.ಮಹಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ.ಮಾಜಿ ಅಧ್ಯಕ್ಷೆ ಗೀತನಂದಿನಿಗೌಡ, ಗೊಲ್ಲರ ಸಂಘದ ಉಪಾಧ್ಯಕ್ಷರುಗಳಾದ ಬಿ.ಕೃಷ್ಣಪ್ಪ, ಕೆ.ಸಿ.ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಆನಂದ, ಸಂಘಟನಾ ಕಾರ್ಯದರ್ಶಿ ಟಿ.ವೆಂಕಟೇಶ್‌ಯಾದವ್, ಎನ್.ಕಿರಣ್‌ಕುಮಾರ್ ಯಾದವ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಹಿರಿಯೂರು ಶಾಸಕಿ ಪೂರ್ಣಿಮ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಹೆಚ್.ಜಿ.ಪ್ರಭಾಕರ್, ವಸತಿನಿಲಯಗಳ ಜಂಟಿ ನಿರ್ದೇಶಕ ಡಾ.ಸಿ.ಕೆ.ಜಗದೀಶ್‌ಕುಮಾರ್, ಅಲೆಮಾರಿಕೋಶದ ಜಂಟಿ ನಿರ್ದೇಶಕ ಡಿ.ಎನ್.ಪ್ರದೀಪ್ ಇವರುಗಳನ್ನು ಸನ್ಮಾನಿಸಲಾಯಿತು.