ಚಿತ್ರದುರ್ಗ: ಪೊಲೀಸ್ ಕ್ರೀಡಾಕೂಟ ಒಂದು ಸಂಪ್ರದಾಯ. ಎಷ್ಟೆ ಅಡೆತಡೆಗಳು ಎದುರಾದರೂ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ ಎಂದು ದಾವಣಗೆರೆ ಪೂರ್ವವಲಯದ ಪೊಲೀಸ್ ಮಹಾನಿರೀಕ್ಷಕ ಪಿ.ದಯಾನಂದ್ ಹೇಳಿದರು.
ಪೊಲೀಸ್ ಪೆರೇಡ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಕ್ರೀಡಾಕೂಟದ ಆರಂಭದ ದಿನವಾದ ಸೋಮವಾರ ಭರಮಸಾಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿದ್ದರಿಂದ ಪೊಲೀಸರು ಅಲ್ಲಿಗೆ ಹೋಗಬೇಕಾಯಿತು. ಆದರೂ ಕ್ರೀಡೆಯನ್ನು ನಿಲ್ಲಿಸಿಲ್ಲ. ವರ್ಷವಿಡಿ ಬಿಡುವಿಲ್ಲದೆ ಕೆಲಸ ಮಾಡುವ ನೀವುಗಳು ಮಾನಸಿಕ ಮತ್ತು ದೈಹಿಕವಾಗಿ ಉಲ್ಲಾಸದಿಂದ ಇರಬೇಕು ಎಂಬುದು ಈ ಕ್ರೀಡಾಕೂಟದ ಉದ್ದೇಶ ಎಂದರು.
ಉತ್ತೇಜಿಸುವುದಕ್ಕಾಗಲಿ, ಪ್ರತಿಭೆಯನ್ನು ಗುರುತಿಸುವುದಕ್ಕಾಗಲಿ, ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿದ್ದಾರೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ ಪೊಲೀಸ್ ಕ್ರೀಡಾಕೂಟವನ್ನು ನಡೆಸುತ್ತಿಲ್ಲ. ಪೊಲೀಸರು ತಂಡೋಪತಂಡವಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿದಾಗ ಮಾತ್ರ ಕರ್ತವ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.
ಅಧಿಕಾರಿ ಮತ್ತು ಸಿಬ್ಬಂದಿ ಎನ್ನುವ ತಾರತಮ್ಯ ಬಿಟ್ಟು ಗುಂಪಾಗಿ ಪೊಲೀಸರು ಕೆಲಸ ಮಾಡಿದಾಗ ಕ್ಲಿಷ್ಟಕರವಾದ ಅಪರಾಧಗಳನ್ನು ಪತ್ತೆಹಚ್ಚುವುದಾಗಲಿ, ಆರೋಪಿಗಳನ್ನು ಬಂಧಿಸುವುದಾಗಲಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಯಾವುದೇ ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆ ಆರೋಗ್ಯಕರವಾಗಿರಬೇಕು ಎಂದು ಪೊಲೀಸರಿಗೆ ಕರೆ ನೀಡಿದರು.
ವರ್ಷಕ್ಕೊಮ್ಮೆ ಈ ರೀತಿ ಕ್ರೀಡಾಕೂಟವನ್ನು ಏರ್ಪಡಿಸುವುದರಿಂದ ಕಾರ್ಯ ಒತ್ತಡದಿಂದ ಹೊರ ಬರಲು ನೆರವಾಗಲಿದೆ. ಮೂರು ದಿನಗಳ ಕಾಲ ನಡೆಯುವ ಕ್ರೀಡೆಯಲ್ಲಿ ಎಲ್ಲಾ ಪೊಲೀಸರು ಭಾಗವಹಿಸಲು ಇದೊಂದು ಅವಕಾಶ. ಕೆಲವೊಮ್ಮೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಬೇಕಾಗುತ್ತದೆ. ಆದರೂ ಯಾವ ಕಾರಣಕ್ಕೂ ಕ್ರೀಡೆಯನ್ನು ನಿಲ್ಲಿಸಿಲ್ಲ. ಮೊದಲಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಕ್ರೀಡೆಯಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ. ಆಸಕ್ತಿಯಿಂದ ಪಾಲ್ಗೊಳ್ಳುವುದು ಮುಖ್ಯ. ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಆಡಿ ಗೆದ್ದವರು ರಾಜ್ಯ ಮಟ್ಟಕ್ಕೆ ಹೋಗಬಹುದು. ಅಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಬಹುಮಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಪೊಲೀಸ್ ಕ್ರೀಡಾಪಟುಗಳಿಗೆ ಹಾರೈಸಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ಕೆ., ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಎಲ್.ಅರಸಿದ್ದಿ ವೇದಿಕೆಯಲ್ಲಿದ್ದರು.
ಡಿ.ಎಸ್.ಪಿ.ಗಳಾದ ಸಂತೋಷ್, ರೋಷನ್‌ಜಮೀರ್, ವೆಂಕಟಪ್ಪನಾಯಕ, ಡಿ.ಆರ್.ಡಿ.ಎಸ್.ಪಿ. ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.