ಚಿತ್ರದುರ್ಗ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಹಿಡಿಯುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಚಿತ್ರದುರ್ಗ ನಾಯಕ ಸಮಾಜದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಈಗಾಗಲೇ ರಾಜಕೀಯವಾಗಿ ಶೇ.೭ ರಷ್ಟು ಮೀಸಲಾತಿ ನೀಡಿದ್ದು, ಶೈಕ್ಷಣಿಕ ಮತ್ತು ಉದ್ಯೋಗದ ನೇಮಕಾತಿಯಲ್ಲಿ ಶೇ.೩ ರಿಂದ ೭.೫ಕ್ಕೆ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಬೇರೆ ಜಾತಿಯವರು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ತಡೆಹಿಡಿದು ವಾಲ್ಮೀಕಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನು ಶೇ.೩ ರಿಂದ ೭ ಕ್ಕೆ ಹೆಚ್ಚಿಸುವಂತೆ ಹಲವಾರು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿಯವರೆಗೂ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು ಭರವಸೆ ನೀಡುವುದರಲ್ಲಿಯೇ ಕಾಲ ಕಳೆಯುತ್ತಿರುವುದನ್ನು ಬಿಟ್ಟರೆ ನಮಗೆ ಯಾವ ಅನುಕೂಲವೂ ಆಗಿಲ್ಲ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಈಗಿನ ಸಮ್ಮಿಶ್ರ ಸರ್ಕಾರ ಈಗಲಾದರೂ ನಮ್ಮ ಹೋರಾಟಕ್ಕೆ ಸ್ಪಂದಿಸಿ ನ್ಯಾಯ ದೊರಕಿಸದಿದ್ದರೆ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ದೀಪಕ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಮೂರು ಪಕ್ಷದ ನಾಯಕರುಗಳು ನಮ್ಮ ಸಮಾಜಕ್ಕೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಸಾಂಕೇತಿಕವಾಗಿ ಈಗ ಹೋರಾಟ ಮಾಡಿದ್ದೇವೆ. ನಮ್ಮ ಮನವಿಯನ್ನು ಸಮ್ಮಿಶ್ರ ಸರ್ಕಾರ ಆಲಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾಯಕ ಸಮಾಜ ಸರಿಯಾದ ನಿರ್ಣಯ ಕೈಗೊಂಡು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ತಕ್ಕ ಶಾಸ್ತ್ರ ಮಾಡುವುದಂತೂ ನಿಶ್ಚಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ನಾಯಕ ಸಮಾಜದ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಾಯಕ ಸಮಾಜದ ಮುಖಂಡರುಗಳಾದ ಗುರುಸಿದ್ದಪ್ಪ, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ರಾಜಾಮದಕರಿನಾಯಕ, ಸರ್ವೆಬೋರಣ್ಣ, ಗೋಪಿನಾಥ್, ಸೋಮೇಂದ್ರ, ಪ್ರಕಾಶ್, ನ್ಯಾಯವಾದಿ ಅಶೋಕ್‌ಬೆಳಗಟ್ಟ, ಸುರೇಶ್, ನಗರಸಭೆ ಮಾಜಿ ಸದಸ್ಯರುಗಳಾದ ಸಿ.ಟಿ.ರಾಜೇಶ್, ತಿಪ್ಪೇಸ್ವಾಮಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.