ಚಿತ್ರದುರ್ಗ: ಪದವಿ ಪಡೆದುಕೊಂಡಿದ್ದೇನೆಂದು ಬೀಗದೆ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ.ಶರಣಪ್ಪ ವಿ.ಹಲಸೆ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದರು.

ಬಿಟ್ಸ್ ಹೈಟೆಕ್ ಕಾಲೇಜು ವತಿಯಿಂದ ಬ್ಯಾಚುಲರ್ ಆಫ್ ಅಪ್ಲಿಕೇಷನ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ರ್‍ಯಾಂಕ್ ಪಡೆದ ಇಬ್ಬರು ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಒಳ್ಳೆತನವನ್ನು ವಿದ್ಯಾರ್ಥಿಗಳು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಪೋಷಕರಿಗೆ ಎಷ್ಟೆ ಕಷ್ಟಗಳಿದ್ದರೂ ಮಕ್ಕಳನ್ನು ಪ್ರತಿಷ್ಟಿತ ಶಾಲಾ-ಕಾಲೇಜುಗಳಲ್ಲಿಯೇ ಸೇರಿಸಿ ಓದಲು ಅವಕಾಶ ಮಾಡಿಕೊಡುತ್ತಾರೆ. ಅದನ್ನು ಸದುಪಯೋಗಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಕಠಿಣ ಪರಿಶ್ರಮವಿದ್ದಲ್ಲಿ ಮಾತ್ರ ನಿಮ್ಮ ಜೀವನದಲ್ಲಿ ಗುರಿಮುಟ್ಟಲು ಸಾಧ್ಯ ಎಂದು ತಿಳಿಸಿದರು.
ಕೇವಲ ಪದವಿ ಪಡೆದುಕೊಂಡು ಸುಮ್ಮನೆ ಕುಳಿತುಕೊಂಡರೆ ಕೆಲಸ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಿಜವಾಗಿಯೂ ಯಾರಲ್ಲಿ ಕೌಶಲ್ಯವಿರುತ್ತದೋ ಅಂತಹವರಿಗೆ ನೂರಾರು ಕೆಲಸಗಳು ಸಿಗುತ್ತವೆ. ಪದವಿ ಪಡೆದು ನೀವುಗಳು ಉನ್ನತ ಮಟ್ಟಕ್ಕೆ ಹೋದಾಗ ನಿಮ್ಮ ತಂದೆ-ತಾಯಿ, ಗುರು-ಹಿರಿಯರು ಓದಿದ ಶಾಲಾ-ಕಾಲೇಜುಗಳನ್ನು ಮರೆಯಬೇಡಿ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ಕಾಯಕವನ್ನು ಶ್ರದ್ದೆಯಿಟ್ಟು ಮಾಡಿ. ಯಾವ ಕೆಲಸವೂ ಮೇಲು ಅಲ್ಲ. ಕೀಳು ಅಲ್ಲ. ಸಾಧನೆಯಿಂದ ಮಾತ್ರ ಜೀವನದಲ್ಲಿ ಮೇಲೇರಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬಿಟ್ಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ೨೦೦೪ ರಲ್ಲಿ ಬಿಟ್ಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆಯನ್ನು ಆರಂಭಿಸಿದೆವು. ಬಯಲುಸೀಮೆ ಚಿತ್ರದುರ್ಗದ ಜಿಲ್ಲೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣ ದುಬಾರಿಯಾಗಿದೆ ಎನ್ನುವುದನ್ನು ತಿಳಿದು ಬಿಸಿಎ.ಪದವಿಯನ್ನು ೨೦೧೩-೧೪ ರಲ್ಲಿ ಆರಂಭಿಸಿ ಈಗ ೧೨೯ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿರುವುದು ಅತ್ಯಂತ ಸಂತಸ ತಂದಿದೆ ಎಂದರು.

೨೦೧೪-೧೫ ನೇ ಸಾಲಿನಲ್ಲಿ ಕೇವಲ ಹದಿನೈದು ವಿದ್ಯಾರ್ಥಿಗಳಿಂದ ಆರಂಭಗೊಂಡ ಬಿ.ಸಿ.ಎ.ಪದವಿ ಶಿಕ್ಷಣದಲ್ಲಿ ೨೦೧೬-೧೭ ನೇ ಸಾಲಿನ ಬಿಸಿಎ.ಅಂತಿಮ ಪದವಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಮತ್ತು ದ್ವಿತೀಯ ರ್‍ಯಾಂಕ್ ಗಳಿಸಿ ಸಂಸ್ಥೆಗೆ, ವಿಶ್ವವಿದ್ಯಾನಿಲಯಕ್ಕೆ ಹಾಗೂ ಪೋಷಕರುಗಳಿಗೆ ಕೀರ್ತಿ ತಂದಿದ್ದಾರೆ ಎಂದು ಗುಣಗಾನ ಮಾಡಿದರು.

ಅಖಿಲ ಭಾರತ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜು ಪ್ರಾಧ್ಯಾಪಕರುಗಳ ಸಂಘಟನೆಗಳ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್.ಮುರಿಗೇಂದ್ರಪ್ಪ, ಸಂಸ್ಥೆಯ ಕಾರ್ಯದರ್ಶಿ ಕೆ.ಆರ್.ಬಸಪ್ಪ, ಅಪರಾಧಶಾಸ್ತ್ರ ಪ್ರಾಧ್ಯಾಪಕ ಡಾ.ನಟರಾಜ್, ಬಿಟ್ಸ್ ಹೈಟೆಕ್ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಕವಿತ ವೇದಿಕೆಯಲ್ಲಿದ್ದರು.