ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸಲು ರೂ.೧.೮೦ ಕೋಟಿ ವೆಚ್ಚದಲ್ಲಿ ಸಿಟಿ ಸನ್ ಖರೀದಿ ಮಾಡಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಇದಕ್ಕೆ ಬೇಕಾದ ಯು.ಪಿ.ಎಸ್.ಖರೀದಿಗೆ ಸಂಸದರು ಸೇರಿದಂತೆ ಎಲ್ಲಾ ಶಾಸಕರು ತಮ್ಮ ಅಭಿವೃದ್ದಿ ನಿಧಿಯಿಂದ ಅನುದಾನ ನೀಡುವರು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಟಕರಮಣಪ್ಪ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ವೇಳೆ ತಿಳಿಸಿದರು. ಜಿಲ್ಲಾ ಆಸ್ಪತ್ರೆಗೆಹೆಚ್ಚು ಬಡಜನರು ಬರುವುದರಿಂದ ಈ ಎಲ್ಲಾ ಜನರಿಗೆ ಸೌಲಭ್ಯ ಸಿಗಬೇಕೆಂದು ಸಂಸದರು ಹಾಗೂ ಶಾಸಕರು ಒಕ್ಕೋರಲಿನಿಂದ ಒಪ್ಪಿಗೆ ನೀಡಿದರು. ಈ ವೇಳೆ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿಯವರು ಪ್ರಸ್ತಾಪಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ವರ್ಷ ಮೂರು ಕೋಟಿಗಿಂತಲೂ ಹೆಚ್ಚು ವಿವಿಧ ಪರಿಕರಗಳನ್ನು ಖರೀದಿ ಮಾಡಲಾಗಿದೆ. ಆದರೆ ಖರೀದಿ ದರದಲ್ಲಿ ಸಾಕಷ್ಟು ಅಂತರ ಇದ್ದು ಮುಂದಿನ ಸಭೆಯಲ್ಲಿ ಸೂಕ್ತ ತನಿಖೆ ಕೈಗೊಳ್ಳಲು ಕ್ರಮ ವಹಿಸಲು ಸಭೆಯಲ್ಲಿ ಒತ್ತಾಯಿಸಿದರು.

ಈ ತ್ರೈಮಾಸಿಕ ಸಭೆಯಲ್ಲಿ ಎಲ್ಲಾ ಇಲಾಖೆಗಳ ಪರಿಶೀಲನೆ ಮಾಡಲು ಸಾಧ್ಯವಾಗಿಲ್ಲ, ಇದರ ಮುಂದುವರೆದ ಸಭೆಯನ್ನು ನಡೆಸಿ ಎಲ್ಲಾ ಇಲಾಖೆಗಳಲ್ಲಿನ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಸಭೆಗೆ ಯಾವುದೇ ಇಲಾಖೆ ಅಧಿಕಾರಿಗಳು ಗೈರು ಹಾಜರಾಗುವುದು ಮತ್ತು ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸಚಿವರು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮಟ್ಕ, ಮರಳು ಸಾಗಣೆ, ಇಸ್ಪೀಟು ಜಾಸ್ತಿಯಾಗಿದೆ. ಹೊಸದುರ್ಗ ಒಂದರಲ್ಲಿ ೧೧ ಕ್ಲಬ್‌ಗಳು ನಡೆಯುತ್ತಿವೆ ಎಂದು ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್ ಪ್ರಸ್ತಾಪಿಸಿದರು. ಇದಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಭೆಯನ್ನು ಮಾಡೋಣ ಎಂದು ಸಚಿವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಕೆಲಸಗಳನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮಕ್ಕೆ ಯಾವುದೇ ಕೆಲಸ ಕೊಡಬಾರದೆಂದು ಇಲಾಖೆಯಿಂದ ಆದೇಶವಾಗಿದ್ದು ಈ ಸಂಸ್ಥೆಗೆ ಯಾವುದೇ ಕೆಲಸ ಕೊಡಬಾರದು. ಮತ್ತು ಹೊಳಲ್ಕೆರೆ ತಾ; ರಾಮಗಿರಿ ಸುಡುಗಾಡು ಸಿದ್ದರ ಕಾಲೋನಿಯಲ್ಲಿ ನಿರ್ಮಿತಿ ಕೇಂದ್ರದಿಂದ ಮಾದರಿ ಮನೆ ನಿರ್ಮಿಸಿದ್ದು ಇದು ಸೋರುತ್ತಿದೆ ಎಂದು ಶಾಸಕರಾದ ಚಂದ್ರಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು.

ಸಚಿವರು ಮಾತನಾಡಿ ಲ್ಯಾಂಡ್ ಆರ್ಮಿಗೆ ಕೆಲಸ ನೀಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ್ದು ಪಾಲನೆ ಮಾಡಲು ಸೂಚಿಸಿದರು. ಡಾ; ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಯಾವ ಯಾವ ತಾಲ್ಲೂಕಿಗೆ ಎಷ್ಟು ಗಂಗಾ ಕಲ್ಯಾಣ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟಿರುವ ವಿವರ ಅಧಿಕಾರಿಗಳಿಂದ ಪಡೆದ ಸಚಿವರು ಇವರಿಗೆ ಆದಷ್ಟು ಬೇಗ ಪಂಪು ಮೋಟಾರು ನೀಡಲು ಕ್ರಮ ಕೈಗೊಳ್ಳಲು ನಿಗಮದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್, ಸಂಸದರಾದ ಬಿ.ಎನ್.ಚಂದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ.ಉಪಾಧ್ಯಕ್ಷರಾದ ಸುಶೀಲಮ್ಮ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಉಪಸ್ಥಿತರಿದ್ದರು.