ಚಿತ್ರದುರ್ಗ: ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಿಸಿ ಜಲಮೂಲವನ್ನು ಉಳಿಸುವಂತೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಒನಕೆ ಒಬವ್ವ ವೃತ್ತದಲ್ಲಿ ಸೋಮವಾರ ಜಾಗೃತಿ ಜಾಥ ನಡೆಸಿದರು.

ತಲೆ ಮೇಲೆ ಖಾಲಿ ಕೊಡಗಳನ್ನಿಟ್ಟುಕೊಂಡು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಆಗಮಿಸಿದ ನೂರಾರು ವಿದ್ಯಾರ್ಥಿನಿಯರು ಗಿಡ-ಮರಗಳನ್ನು ಕಡಿದು ಪರಿಸರವನ್ನು ನಾಶಪಡಿಸುತ್ತಿರುವುದರಿಂದ ಸಕಾಲಕ್ಕೆ ಮಳೆಯಾಗದೆ ಸಕಲ ಜೀವರಾಶಿಗಳು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಜಲಮೂಲವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮನವಿ ಮಾಡಿದರು.

ತಲೆ ಮೇಲೆ ಖಾಲಿ ಕೊಡ, ಬಿಂದಿಗೆ, ಚಿಕ್ಕ ಚಿಕ್ಕ ಪಾತ್ರೆಗಳನ್ನು ಕೈಯಲ್ಲಿಡಿದುಕೊಂಡು ನೀರಿನ ಭೀಕರತೆಯನ್ನು ಸಾರಿದ ವಿದ್ಯಾರ್ಥಿನಿಯರು ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಿದರೆ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಬರಗಾಲದಲ್ಲಿಯೂ ಸ್ವಲ್ಪಮಟ್ಟಿಗೆ ನೀರು ದೊರಕುವಂತೆ ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಮೊದಲು ಜಲಮೂಲವನ್ನು ಕಂಡುಕೊಳ್ಳಬೇಕು ಎಂದು ನೀರನ್ನು ಸಂರಕ್ಷಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಪರಿಸರ ತಜ್ಞ ಡಾ.ಹೆಚ್.ಎಸ್.ಕೆ.ಸ್ವಾಮಿ, ಪ್ರಾಧ್ಯಾಪಕ ಕೆ.ಕೆ.ಕಮಾನಿ, ಲೇಖಕ ಆನಂದಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.