ಚಿತ್ರದುರ್ಗ: ಸೇವೆಯಲ್ಲಿನ ಅನುಭವವನ್ನು ಬಳಸಿಕೊಂಡು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಜನಸೇವೆ ಸಲ್ಲಿಸಿ ಎಂದು ಸಶಸ್ತ್ರ ಮೀಸಲು ಪಡೆಯ ಪೇದೆಗಳಿಗೆ ಡಿ.ಐ.ಜಿ. ಎಸ್.ಲಾಭೂರಾಂ ತಿಳಿಸಿದರು.

೨೦೦೮ ರಲ್ಲಿ ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಗಳಾಗಿದ್ದ ಸಂಧರ್ಭದಲ್ಲಿ ನೇಮಕ ಮಾಡಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆಗಳ ಸಾರ್ಥಕ ಸೇವೆಯ ದಶಕದ ಸಂಭ್ರಮವನ್ನು ಭಾನುವಾರ ಪೊಲೀಸ್ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗದಲ್ಲಿ ಮೂರು ವರ್ಷಗಳ ಕಾಲ ರಕ್ಷಣಾದಿಕಾರಿಯಾಗಿ ಸೇವೆ ಸಲ್ಲಿಸಿರುವುದು ನನಗೆ ಅತ್ಯಂತ ಖುಷಿ ಕೊಟ್ಟಿದೆ. ಪೊಲೀಸರು ಕರ್ತವ್ಯದ ಒತ್ತಡಗಳ ನಡೆವೆಯೂ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದುಕೊಂಡು ಸೇವಾವಧಿಯಲ್ಲಿ ಸಾಧನೆಗೈದು ಇಲಾಖೆಗೆ ಕೀರ್ತಿ ತರುವಂತೆ ಹೇಳಿದರು.
ಮೈಮೇಲೆ ಖಾಕಿ ಧರಿಸಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಿಮಗೆ ಸಿಕ್ಕಿದೆ. ಡಿ.ಆರ್. ಸಿವಿಲ್ ಎನ್ನುವ ತಾರತಮ್ಯ ಬೇಡ. ಎಲ್ಲರೂ ಒಟ್ಟಾಗಿ ಕರ್ತವ್ಯದಲ್ಲಿ ತೊಡಗಿದಾಗ ಮಾತ್ರ ಶಾಂತಿಯುತ ಸಮಾಜ ನಿರ್ಮಿಸಿಬಹುದು. ದಿನದ ೨೪ ಗಂಟೆಯೂ ಒತ್ತಡದಲ್ಲಿಯೇ ಪೊಲೀಸರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹಾಗಾಂತ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಪುರುಸೊತ್ತು ಸಿಕ್ಕಾಗ ನಿಮ್ಮ ಹಾಗೂ ಅವಲಂಭಿತರ ಆರೋಗ್ಯದ ಕಡೆ ಗಮನ ಕೊಟ್ಟು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ. ಪೊಲೀಸ್ ಕೆಲಸದ ಜೊತೆಯಲ್ಲಿಯೇ ಕ್ರೀಡೆಯಲ್ಲಿಯೂ ಪಾಲ್ಗೊಂಡು ಉತ್ತಮ ಸಾಧನೆ ಮಾಡಿ ಇಲಾಖೆಗೆ ಕೀರ್ತಿ ತಂದು ವೈಯಕ್ತಿಕವಾಗಿ ಸಮಾಜದಲ್ಲಿ ಸ್ಥಾನಮಾನ ಗಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರು ಹಾಗೂ ಎಸ್ಪಿ ಪಿ.ಪಾಪಣ್ಣ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ತುಂಬಾ ಅಪರೂಪ. ಹತ್ತು ವರ್ಷಗಳ ಹಿಂದೆ ನೇಮಕಗೊಂಡಿರುವ ಸಶಸ್ತ್ರ ಮೀಸಲು ಪಡೆಯ ಪೇದೆಗಳು ಸಾರ್ಥಕ ಸೇವೆಯ ದಶಕದ ಸಂಭ್ರಮ ಏರ್ಪಡಿಸಿರುವುದರಿಂದ ಪರಸ್ಪರ ಸ್ನೇಹ ಬಾಂಧವ್ಯ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಹೆಚ್ಚುವರಿ ರಕ್ಷಣಾಧಿಕಾರಿ ರಾಮ್‌ಲಕ್ಷ್ಮಣ ಅರಸಿದ್ದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ವೈ.ಎಸ್ಪಿ.ಸಂತೋಷ್, ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್ಪಿ ತಿಪ್ಪೇಸ್ವಾಮಿ, ಇನ್ಸ್‌ಪೆಕ್ಟರ್‌ಗಳಾದ ಹೆಚ್.ಜೆ.ರಾಮಕೃಷ್ಣಪ್ಪ, ಸೋಮಶೇಖರಪ್ಪ, ನಗರ ಠಾಣೆ ಇನ್ಸ್‌ಪೆಕ್ಟರ್ ಎಸ್.ಟಿ.ಒಡೆಯರ್, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಪತ್ರಾಂಕಿತ ಸಹಾಯಕ ಮಾರುತೇಶ್‌ರೆಡ್ಡಿ ವೇದಿಕೆಯಲ್ಲಿದ್ದರು.
ಮಹಂತೇಶ್ ಪ್ರಾರ್ಥಿಸಿದರು. ಪವನ್‌ಕುಮಾರ್ ಸ್ವಾಗತಿಸಿದರು. ದಿನೇಶ್ ನಿರೂಪಿಸಿದರು.