ಚಿತ್ರದುರ್ಗ: ಎಪ್ಪತ್ತು ವರ್ಷಗಳಿಂದ ದೇಶದಲ್ಲಿ ಆಗದ ಬಲಾವಣೆಯನ್ನು ಪ್ರಧಾನಿ ನರೇಂದ್ರಮೋದಿರವರು ಕೇವಲ ನಾಲ್ಕವರೆ ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುಣಗಾನ ಮಾಡಿದರು.

ಭಾರತೀಯ ಜನತಾಪಾರ್ಟಿ ಜಿಲ್ಲಾ ಆರ್ಥಿಕ ಪ್ರಕೋಷ್ಟದಿಂದ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ನರೇಂದ್ರಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ವಿಶ್ಲೇಷಣೆ ಮತ್ತು ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅರ್ಥವ್ಯವಸ್ಥೆಯನ್ನೇ ಹಾಳು ಮಾಡಿರುವ ಕಾಂಗ್ರೆಸ್‌ನವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ.ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ನರೇಂದ್ರಮೋದಿರವರ ಸಾಧನೆ ಏನು ಎಂಬುದು ದೇಶದ ಜನರಿಗೆ ಗೊತ್ತಿದೆ. ನಾಲ್ಕುವರೆ ವರ್ಷದಲ್ಲಿ ಪ್ರಧಾನಿರವರ ಗುರುತರ ಸಾಧನೆಯನ್ನು ಪ್ರತಿ ಮನೆ ಮನೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.

೧೯೭೦-೭೧ ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದರು. ಆದರೆ ನಿಜವಾದ ಬಡವರಿಗೆ ಬ್ಯಾಂಕ್‌ನಲ್ಲಿ ವ್ಯವಹರಿಸುವ ಅವಕಾಶ ಸಿಗಲಿಲ್ಲ. ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಯಾವುದೇ ಠೇವಣಿಯಿಲ್ಲದೆ ಬಡವರು ಉಚಿತವಾಗಿ ಬ್ಯಾಂಕ್‌ಗಳಲ್ಲಿ ಜನ್‌ಧನ್ ಖಾತೆ ತೆರೆಯಲು ಅವಕಾಶ ಮಾಡಿಕೊಟ್ಟರು ಇದರಿಂದ ೬೦ ಕೋಟಿ ಮಂದಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದಿನಕ್ಕೆ ಕೇವಲ ಒಂದರಿಂದ ಎರಡು ಕಿ.ಮೀ.ಹೆದ್ದಾರಿ ರಸ್ತೆಯಾಗುತ್ತಿತ್ತು. ಈಗಿನ ಬಿಜೆಪಿ.ಸರ್ಕಾರದಲ್ಲಿ ದಿನಕ್ಕೆ ನಲವತ್ತರಿಂದ ಐವತ್ತು ಕಿ.ಮೀ.ಹೆದ್ದಾರಿ ರಸ್ತೆಯಾಗುತ್ತಿದೆ. ಇವೆಲ್ಲ ಕಣ್ಣಿದುರಿಗೆ ಕಾಣುವ ಅಭಿವೃದ್ದಿ ಕೆಲಸಗಳು ಎಂದರು.

ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಎಫ್.ಕೆ.ಸಿ.ಸಿ.ಐ.ಕೈಗಾರಿಕಾ ಸಮಿತಿ ಅಧ್ಯಕ್ಷ ಚಳ್ಳಕೆರೆಯ ಎನ್.ಸತೀಶ್‌ಬಾಬು, ಆರ್ಥಿಕ ಪ್ರಕೋಷ್ಟದ ಸಹ ಸಂಚಾಲಕಿ ಲತನರಸಿಂಹಮೂರ್ತಿ, ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್ ವೇದಿಕೆಯಲ್ಲಿದ್ದರು.