ಚಿತ್ರದುರ್ಗ: ಮಧ್ಯ ಕರ್ನಾಟಕ ಬುಡಕಟ್ಟು ಸಮುದಾಯದ ಶ್ರಮ ಸಂಸ್ಕೃತಿಯ ನೇತಾರ, ಧಾರ್ಮಿಕ ಕ್ಷೇತ್ರದಲ್ಲಿ ಉತ್ಸವಗಳ ರಾಜನೆಂದು ಕರೆಯಲ್ಪಡುವ ಹಟ್ಟಿ ತಿಪ್ಪಯ್ಯ ಎಂದೇ ಹೆಸರಾಗಿರುವ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಯದೊಡ್ಡ ರಥೋತ್ಸವ ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದ ಬುಧವಾರ ಮಧ್ಯಾಹ್ನ ೩.೩೦ ಗಂಟೆಗೆ ಸರಿಯಾಗಿ ಜನಸಾರದೊಂದಿಗೆ ಸಡಗರ ಸಂಭ್ರಮದೊಂದಿಗೆ ಜರುಗಿತು.

ರಥೋತ್ಸವ ನಡೆಯುವ ಮುನ್ನ ಬೆಳಿಗ್ಗೆ ೯ ಗಂಟೆಯಿಂದ ವೃಷಭವಾಹ ಯುಕ್ತ ಚಿಕ್ಕ ರಥೋತ್ಸವ ನಡೆಯಿತು. ಮಧ್ಯಾಹ್ನ ೧೨ ಗಂಟೆಯಿಂದ ದೊಡ್ಡರಥೋತ್ಸವಕ್ಕೆ ಸಿದ್ದತೆಗಳು ನಡೆದವು. ಫಣಿಯಪ್ಪನ ವಂಶಜರಾದ ಪೂಜಾರಿ ಮನೆಯಲ್ಲಿ ವಿಧಿವತ್ತಾಗಿ ತಯಾರಿಸಿದ ಬಲಿ ಅನ್ನವನ್ನು ಹೊತ್ತ ಗೊಂಚಿಕಾರರು ಅಲಂಕೃತಗೊಂಡ ಬಸವ ಬಸವಿಯರು ಉತ್ಸವಮೂರ್ತಿ ಪ್ರತಿಷ್ಟಾಪಿಸಿ ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯೊಂದಿಗೆ ಮಂಗಳವಾಧ್ಯ, ನಂದಿಕೋಲು, ಗೊರವನಕುಣಿತ, ಆಯಗಾರರ ದಂಡಿನೊಂದಿಗೆ ಭಕ್ತರ ಹಿಂಡು ತೇರಿನ ಬಳಿ ಮಡಿಯಲ್ಲಿ ಬರುತ್ತಾರೆ.

ಬಾಬುದಾರರಾದ ತಳವಾರನಾಯಕ, ಮಣಿಗಾರರು, ಜೋಗಿಹಟ್ಟಿಯವರು, ದೈವದ ಹೆಸರಿನಲ್ಲಿ ನಾಲ್ಕು ದಿಕ್ಕಿನ ರಥದ ಗಾಲಿಗಳಿಗೆ ಬಲಿ ಅನ್ನ ಹಾಕಿದ ನಂತರ ಶಾಸ್ತ್ರೋಕ್ತವಾಗಿ ಪೂಜೆ ಪುಣ್ಯಾನ ಶಾಶ್ತ್ರಗಳಿಂದ ಮೊದಲು ಕುಪ್ಪಿನಕೆರೆ ಆಂಜನೇಯಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ಶ್ರೀ ತಿಪ್ಪೇಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿ ಮುಕ್ತಿ ಬಾವುಟ ಹರಾಜು ಮಾಡಲಾಯಿತು. ನಂತರ ಮಣಿ ಕೊಡುವ ಭಕ್ತರು ಮನ್ನೆಕೋಟೆ, ತಳಕು ದೈವದವರು ಹೆಸರು ಕೂಗಿ ಕರೆದು ಸ್ವಾಮಿಯ ರಥದ ಹಗ್ಗಕ್ಕೆ ಕೈಹಾಕುತ್ತಿದ್ದಂತೆ ಸುಮಾರು ೮೦ ಟನ್ ತೂಕದ ೮೦ ಅಡಿ ಎತ್ತರದ ಐದು ಗಾಲಿಗಳು ೯ ಮಜಲಿನ ದೊಡ್ಡದಾದ ಶ್ರೀ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ ಎಂಬ ಕೂಗೂ ಮುಗಿಲು ಮುಟ್ಟುತ್ತಲೆ ಬೃಹತ್ ರಥ ಮುಂದೆ ಸಾಗಿತು. ಭಕ್ತರು ಸ್ವಾಮಿಯ ರಥಕ್ಕೆ ಬಾಳೆಹಣ್ಣು, ಸೂರು ಬೆಲ್ಲ ಮೆಣಸು, ತೂರುವ ಮೂಲಕ ಸ್ವಾಮಿಗೆ ಹರಕೆಯನ್ನು ತೀರಿಸಿದರು.

ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳಿಂದ ಆಗಮಿಸಿದ್ದ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತ ಸಮೂಹ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದ ಭಕ್ತಸಾಗರ ತಮ್ಮ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಭಾವ ಸಮರ್ಪಿಸಿದರು.
ಮಧ್ಯಾಹ್ನ ೩.೦೦ ರ ಸುಮಾರಿಗೆ ಆರಂಭವಾದ ರಥೋತ್ಸವ ಇಲ್ಲಿನ ಪಾದಗಟ್ಟೆವರೆಗೆ ಸಾಗಿತು. ನಾಡಿನ ವಿವಿಧೆಡೆಗಳಿಂದ ಆಗಮಿಸಿ ನಾಯಕನಹಟ್ಟಿಯ ತೇರಿನ ಬೀದಿಯಲ್ಲಿ ಜಮಾಯಿಸಿದ್ದ ಜನಸಾಗರ ರಥೋತ್ಸವ ಆರಂಭವಾಗುತ್ತಿದ್ದಂತೆ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ, ಹಟ್ಟಿ ತಿಪ್ಪೇಶನಿಗೆ ಜಯವಾಗಲಿ, ಶ್ರಮ ಸಂಸ್ಕೃತಿಯ ಹರಿಕಾರನಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗುವ ಮೂಲಕ ಭಾವಪರವಶರಾದರು.

ರಥ ಹೊರಡುತ್ತಿದ್ದಂತೆ ಜನರು ಕರಿ ಮೆಣಸು, ಬಾಳೆಹಣ್ಣು ಮತ್ತಿತರ ಹಣ್ಣುಗಳನ್ನು ರಥದ ಮೇಲಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಮತ್ತಷ್ಟು ಜನರು ಸ್ವಾಮಿಯ ರಥಕ್ಕೆ ಕಟ್ಟಿದ್ದ ಬೃಹತ್ ಗಾತ್ರದ ಹಗ್ಗ ಹಿಡಿದು ರಥ ಎಳೆದು ಕೃತಾರ್ಥರಾದರು. ಜಾತ್ರೆಗೆ ಬಂದಿದ್ದ ಜನಸಮೂಹ ನಾ ಮುಂದು, ತಾ ಮುಂದು ಎಂದು ಸ್ವಾಮಿಯ ದರ್ಶನಕ್ಕೆ ಹಣ್ಣು, ಕಾಯಿ ಹಿಡಿದು ಸರತಿಯ ಸಾಳಿನಲ್ಲಿ ಸಾಗುತ್ತಿದ್ದರು. ಹೊಸ ಬಾಳಿಗೆ ಅಡಿಯಿಟ್ಟ ನೂತನ ದಂಪತಿಗಳು ಪರಸ್ಪರ ಕೈ ಕೈ ಹಿಡಿದು ಸಂಭ್ರಮದಿಂದ ಜಾತ್ರೆಯಲ್ಲಿ ಓಡಾಡುತ್ತಿದ್ದರು. ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಲಕ್ಷೆಪ ಲಕ್ಷ ಜನರು ಜಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಬಿರು ಬಿಸಿಲನ್ನೂ ಲೆಕ್ಕಿಸದ ಭಕ್ತ ಜನರು ಬಯಲುಸೀಮೆಯ ಐತಿಹಾಸಿಕ ಜಾತ್ರೆಯ ಸೊಬಗನ್ನು ಸವಿದರು.