ಚಿತ್ರದುರ್ಗ: ಚಿತ್ರದುರ್ಗ, ತುಮಕೂರು, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಏ.8 ರಂದು ಆಗಮಿಸಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಏ.9 ರಂದು ಮಧ್ಯಾಹ್ನ 1 ಗಂಟೆಗೆ ಬರುತ್ತಿದ್ದಾರೆ. ಹಾಗಾಗಿ ಬೃಹತ್ ಚುನಾವಣಾ ರ್ಯಾಲಿಯನ್ನು ಒಂದು ದಿನಕ್ಕೆ ಮುಂದೂಡಲಾಗಿದೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.

ಬಿಜೆಪಿ.ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ರಾಜ್ಯದ ಉಸ್ತುವಾರಿ ಹೊತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಪದಾಧಿಕಾರಿಗಳಿಂದ ನಮಗೆ ಈ ಮಾಹಿತಿ ಸಿಕ್ಕಿತು. ತುಮಕೂರು, ಚಿತ್ರದುರ್ಗ, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಕಾರ್ಯಕರ್ತರು, ಅಭ್ಯರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಆರ್.ಅಶೋಕ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಮೂರು ಕ್ಷೇತ್ರಗಳ ಹದಿನಾಲ್ಕು ಶಾಸಕರುಗಳು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮೋದಿರವರ ಆಗಮನಕ್ಕೆ ಭದ್ರೆತೆಗಾಗಿ ಪೊಲೀಸ್ ಮತ್ತು ಎಸ್.ಪಿ.ಜಿ.ಯವರು ಪರಿಶೀಲನೆ ಆರಂಭಿಸಿದ್ದಾರೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಮೋದಿಯನ್ನು ವೀಕ್ಷಿಸಲು ಬರುವವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳವರಿಗೆ, ಗಣ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಸನಗಳ ವ್ಯವಸ್ಥೆ ಮಾಡಲಾಗುವುದು. ಸೋಮವಾರದಿಂದ ಪಾಸ್ ವಿತರಿಸುವುದಾಗಿ ಹೇಳಿದರು.

ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಚಿತ್ರದುರ್ಗ ಲೋಕಸಭಾ ಚುನಾವಣೆ ಸಂಚಾಲಕ ಟಿ.ಜಿ.ನರೇಂದ್ರನಾಥ್, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.