ಚಿತ್ರದುರ್ಗ,: ನಾವು ಬೆಳೆಯಬೇಕು. ಬೇರೆಯವರನ್ನೂ ಬೆಳೆಸಬೇಕೆಂಬುದೇ ಸುಕೋ ಬ್ಯಾಂಕ್‌ನ ಉದ್ದೇಶ. ಹಾಗಾಗಿ ಬ್ಯಾಂಕ್‌ನಲ್ಲಿ ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ತಿಳಿಸಿದರು.
ನಗರದ ತುರುವನೂರು ರಸ್ತೆಯಲ್ಲಿರುವ ಬ್ಯಾಂಕ್‌ನ ನೂತನ ನಿವೇಶನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಶಾಖೆ ಉದ್ಘಾಟನೆ ಹಾಗೂ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಖೆ ಸಂಪೂರ್ಣ ಕಂಪ್ಯೂಟರ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಹವಾನಿಯಂತ್ರಿತ ಕೊಠಡಿ. ಸುಕೋ ಬ್ಯಾಂಕ್‌ನಿಂದ ದೇಶದ ಯಾವುದೇ ಬ್ಯಾಂಕ್‌ನ ಶಾಖೆಗೆ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ನೀಡಲಾಗುತ್ತಿದೆ. ಬೆಳಗ್ಗೆ ೧೦.೩೦ ರಿಂದ ಸಂಜೆ ೭ ರವರೆಗೆ ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ ಎಂದರು.
ಕಳೆದ ೨೨ ವರ್ಷಗಳ ಹಿಂದೆ ಸಿಂಧನೂರಿನಲ್ಲಿ ಆರಂಭವಾದ ಸುಕೋ ಬ್ಯಾಂಕ್ ಈವರೆಗೆ ೪೫೦ ಕೋಟಿಯಷ್ಟು ವಹಿವಾಟು ನಡೆಸಿದ್ದು, ಸಹಕಾರಿ ಕ್ಷೇತ್ರದ ಅಗ್ರಣಿ ಬ್ಯಾಂಕ್ ಎನಿಸಿದೆ ಹೈದ್ರಾಬಾದ್-ಕರ್ನಾಟಕ ಭಾಗದ ಯಾವೊಂದು ಸಹಕಾರಿ ಬ್ಯಾಂಕ್ ಸಹ ಲಾಭದಲ್ಲಿರಲಿಲ್ಲ. ಆರಂಭದಲ್ಲಿ ವಿರೋಧ ಬಂತು. ಅನೇಕ ಬ್ಯಾಂಕ್‌ಗಳು ನಷ್ಟದಲ್ಲಿ ನಡೆಯುತ್ತಿರುವ ಕಾರಣ ಏನೆಂಬುದನ್ನು ತಿಳಿದುಕೊಂಡು ಅಂತಹ ತಪ್ಪುಗಳು ಸುಕೋ ಬ್ಯಾಂಕ್‌ನಲ್ಲಿ ನಡೆಯದಂತೆ ನಿಯಮ ರೂಪಿಸಲಾಯಿತು ಎಂದರು.
ಬ್ಯಾಂಕ್‌ನ ನಿರ್ದೇಶಕರ ಸಂಬಂಧಿಕರಿಗೆ ಸಾಲ ನೀಡದಿರುವುದು. ನಿರ್ದೇಶಕರ ಸಂಬಂಧಿಕರಿಗೆ ಬ್ಯಾಂಕ್‌ನಲ್ಲಿ ನೌಕರಿ ನೀಡದಿರುವುದು. ಬ್ಯಾಂಕ್‌ನಿಂದ ಸಾಲ ನೀಡುವಂತೆ ಯಾರಿಗೂ ಶಿಫಾರಸು ಮಾಡದಿರುವುದು ಸೇರಿದಂತೆ ಅನೇಕ ನಿಯಮಗಳನ್ನು ಅಳವಡಿಸಿಕೊಳ್ಳಲಾಯಿತು. ಈ ಎಲ್ಲ ಅಂಶಗಳನ್ನು ಗಮನಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂಟು ವರ್ಷಗಳ ನಂತರ ಈ ನಿಯಮಗಳನ್ನು ಎಲ್ಲ ಸಹಕಾರಿ ಬ್ಯಾಂಕ್‌ಗಳಿಗೆ ಕಡ್ಡಾಯ ಮಾಡಿತು. ಇದರ ಪರಿಣಾಮವಾಗಿ ಇಂದು ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ೫೦೦ಕ್ಕೂ ಹೆಚ್ಚು ಅರ್ಬನ್ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌ಗಳಿವೆ ಎಂದು ಹೇಳಿದರು.
ಬ್ಯಾಂಕ್‌ನಲ್ಲಿ ಉತ್ತಮ ಲಾಕರ್ ಸೌಲಭ್ಯವೂ ಇರುತ್ತದೆ. ಆದರೆ ಈಗ ಬ್ಯಾಂಕ್ ತಾತ್ಕಾಲಿಕ ಕಟ್ಟಡದಲ್ಲಿ ಕೆಲಸ ನಿರ್ವಹಿಸುವುದರಿಂದ ಈ ವ್ಯವಸ್ಥೆ ಇಲ್ಲ. ಸ್ವಂತ ಕಟ್ಟಡಕ್ಕೆ ಬಂದ ನಂತರ ಲಾಕರ್ ಸೌಕರ್ಯ ನೀಡಲಾಗುವುದು. ಮುಂದಿನ ೮-೯ ತಿಂಗಳಲ್ಲಿ ಸ್ವಂತ ಕಟ್ಟಡ ಸಿದ್ದವಾಗಲಿದೆ. ಸಹಕಾರಿ ಕ್ಷೇತ್ರದ ದಿಕ್ಕನ್ನು ಬದಲಿಸಬೇಕಾದ ಅಗತ್ಯವಿದೆ. ಹಾಗಾಗಿ ನಮ್ಮ ಬ್ಯಾಂಕ್‌ನ ಉದ್ಘಾಟನೆಗೆ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲಕ್ಷ್ಮೀಕಾಂತ್‌ರೆಡ್ಡಿ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ನಗರದ ಮರ್ಚೆಂಟ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್‌ಲಕ್ಷ್ಮೀಕಾಂತ್ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸುಕೋ ಬ್ಯಾಂಕ್ ಕೆಲವೇ ವರ್ಷಗಳಲ್ಲ ಉತ್ತಮ ಸಹಕಾರಿ ಬ್ಯಾಂಕ್ ಆಗಿ ಬೆಳೆದು ನಿಂತಿದೆ. ಶೀಘ್ರ ಗತಿಯಲ್ಲಿ ಬೆಳೆಯುತ್ತಿರುವ ಈ ಬ್ಯಾಂಕ್ ಬಯಲುಸೀಮೆ ಜನರಿಗೆ ಉತ್ತಮ ಸೇವೆ ನೀಡಲಿ. ಆಧುನಿಕ ತಂತ್ರಜ್ಞಾನವನ್ನು ಅಳವಡಿಕೊಂಡು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲಿ ಎಂದು ಆಶಿಸಿದರು.
ಬ್ಯಾಂಕ್‌ನ ಸಿ ಇ ಒ ವೆಂಕಟೇಶ್‌ರಾವ್ ವೇದಿಕೆಯಲ್ಲಿದ್ದರು. ಬ್ಯಾಂಕ್‌ನ ಅನೇಕ ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.