ಚಿತ್ರದುರ್ಗ: ದೊಡ್ಡವರಲ್ಲಿ ಮೊದಲು ಪರಿಸರ ಸಂರಕ್ಷಣೆ ಬಗ್ಗೆ ಅರಿವಿದ್ದರೆ ಮಕ್ಕಳಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಬಹುದು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ ತಿಳಿಸಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಅರಣ್ಯ ಇಲಾಖೆ, ಕಲಾ ಚೈತನ್ಯ ಸೇವಾ ಸಂಸ್ಥೆ, ಬೇದ್ರೆ ಆರ್ಟ್ಸ್ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಸಮಾಜ ಬೇಕು. ಪ್ಲಾಸ್ಟಿಕ್‌ನ್ನು ದಿನನಿತ್ಯದ ಬದುಕಿನಿಂದ ದೂರವಿಡುವುದು ಕಷ್ಠದ ಕೆಲಸ. ಆದರೆ ಸುಲಭವಾಗಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬಹುದು. ಪ್ರತಿಯೊಬ್ಬರು ತುರ್ತು ಅಗತ್ಯವಿರುವ ಕೆಲಸಕ್ಕೆ ಹೆಚ್ಚಿನ ಗಮನ ಕೊಡುವುದು ಸಹಜ. ಹಾಗಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ಯಾರು ಮುಂದಾಗುತ್ತಿಲ್ಲ ಎಂದು ವಿಷಾಧಿಸಿದರು.
ಈಗಾಗಲೆ ಪರಿಸರ ಸಾಕಷ್ಠು ಹಾಳಾಗಿದೆ. ಆದರೂ ಉಳಿಸಿಕೊಳ್ಳಲು ಇನ್ನು ಅವಕಾಶಗಳಿವೆ. ಒಂದೊಂದೆ ಹೆಜ್ಜೆ ಇಟ್ಟರೆ ಮಾತ್ರ ಗುರಿ ತಲುಪಲು ಸಾಧ್ಯ. ನಮ್ಮ ಅಕ್ಕಪಕ್ಕದಲ್ಲಿ ಏನಾದರೂ ಪರಿಸರ ನಾಶವಾಗುತ್ತಿದ್ದರೆ ನೋಡಿಕೊಂಡು ಸುಮ್ಮನಿರಬಾರದು. ರಕ್ಷಿಸಲು ಮುಂದಾಗಬೇಕು. ಎಲ್ಲೆಂದರಲ್ಲಿ ಚಿಪ್ಸ್, ಕುರ್‌ಕುರೆ ಪಾಕೆಟ್‌ಗಳನ್ನು ಮಕ್ಕಳಿಂದ ಹಿಡಿದು ಹಿರಿಯರು ಎಸೆಯುವುದು ಪರಿಸರಕ್ಕೆ ದೊಡ್ಡ ಮಾರಕವಾಗಿದೆ. ಪ್ಲಾಸ್ಟಿಕ್ ಬೇಡದ ಕಡೆ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಬಟ್ಟೆ ಚೀಲಗಳನ್ನು ಬಳಸಬೇಕು. ಮನೆಯಲ್ಲಿ ಸಂಗ್ರಹವಾಗುವ ಎಲ್ಲಾ ವೇಸ್ಟ್‌ಗಳನ್ನು ಒಂದೆ ಡಬ್ಬದಲ್ಲಿ ಹಾಕುವುದು ಕೂಡ ಪರಿಸರಕ್ಕೆ ಮಾರಕ. ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯಗಳನ್ನು ಪ್ರತ್ಯೇಕ ಮಾಡಿ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಬೇಕಾಗಿದೆ ಎಂದು ತಿಳಿಸಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ್, ಪರಿಸರ ಅಧಿಕಾರಿ ಸಿ.ಡಿ.ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್, ಚಿತ್ರಕಲಾವಿದ ನಾಗರಾಜ್‌ಬೇದ್ರೆ, ಪರಿಸರ ತಜ್ಞ ಡಾ.ಹೆಚ್.ಕೆ.ಎಸ್.ಸ್ವಾಮಿ ವೇದಿಕೆಯಲ್ಲಿದ್ದರು