ಚಿತ್ರದುರ್ಗ: ದೈವದತ್ತವಾಗಿ ಬಂದಿರುವ ಪರಿಸರವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ನ್ಯಾಯಾಧೀಶರಾದ ವಿರುಪಾಕ್ಷಯ್ಯನವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮಲ್ಲಾಪುರದಲ್ಲಿರುವ ಬಾಪೂಜಿ ಪಿ.ಯು.ಕಾಲೇಜು ಹಾಗೂ ಸಿ.ಬಿ.ಎಸ್.ಇ. ಆವರಣದಲ್ಲಿ ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‌ಮಿಲ್ ಸಿಟಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಪರಿಸರವಿಲ್ಲದೆ ಏನು ಇಲ್ಲ. ಪರಿಸರವೆಂದರೆ ನಮ್ಮ ಸುತ್ತಮುತ್ತಲಿರುವ ಗಿಡ-ಮರ, ಬೆಟ್ಟಗುಡ್ಡ ಹಳ್ಳ ಕೊಳ್ಳ, ನೆಲ ಜಲ ಇಷ್ಟು ಮಾತ್ರವಲ್ಲ. ಭೌತಿಕ ಮತ್ತು ಅಂತರಾಳದ ಪರಿಸರವೂ ಬಹಳ ಮುಖ್ಯ ಎಂದು ಹೇಳಿದರು.
೧೯೭೨ ರಲ್ಲಿ ವಿಶ್ವಸಂಸ್ಥೆ ವಿಶ್ವಪರಿಸರ ದಿನಾಚರಣೆಯನ್ನು ಘೋಷಿಸಿತು. ನಂತರ ೧೯೭೩ ರಿಂದ ಪ್ರತಿ ವರ್ಷವೂ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮನುಷ್ಯನ ಸ್ವಾರ್ಥಕ್ಕಾಗಿ ಕಾಡುಗಳು ನಾಶವಾಗುತ್ತಿದೆ. ಗಿಡ-ಮರ, ನೆಲ, ಜಲ, ಭಾಷೆ ಇವುಗಳನ್ನು ಸಂರಕ್ಷಣೆ ಮಾಡದೇ ಹೋದಲ್ಲಿ ಮುಂದೊಂದು ದಿನ ಬಾರಿ ದಂಡ ತೆರಬೇಕಾಗುತ್ತದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಂಡು ಪರಿಸರವನ್ನು ಉಳಿಸಿ ಎಂದರು.
ಹಣ, ಐಶ್ವರ್ಯದ ಸಂಪತ್ತಿಗಿಂತ ಆರೋಗ್ಯ ಶ್ರೇಷ್ಟ ಸಂಪತ್ತು. ಗಿಡ ನೆಟ್ಟ ಮೇಲೆ ಅದರ ಬೆಳವಣಿಗೆಯತ್ತ ಕಾಳಜಿ ವಹಿಸಬೇಕು. ಮಕ್ಕಳು ಶಿಕ್ಷಣಕ್ಕೆ ಗಮನ ನೀಡುವ ಜೊತೆಯಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‌ಮಿಲ್ ಸಿಟಿ ಅಧ್ಯಕ್ಷೆ ಹೆಚ್.ಟಿ.ಉಮಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೋಭಾವತಿ, ಸುಮವೀರೇಶ್, ಅಂಬಿಕ, ಬಿ.ಆರ್.ಸಿ.ಈಶ್ವರಪ್ಪ, ಪ್ರಾಂಶುಪಾಲರಾದ ರುದ್ರಪ್ಪ ಇನ್ನು ಮುಂತಾದವರು ವಿಶ್ವಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಚಂದನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಲಜಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.