ಚಿತ್ರದುರ್ಗ:  ಜಿಲ್ಲೆಯ ವಿವಿಧೆಡೆ ಆಯುಷ್ ವೈದ್ಯರು ತಮ್ಮ ಆಸ್ಪತ್ರೆ ವ್ಯಾಪ್ತಿಯಲ್ಲಿನ ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಹಾಗೂ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಹಿಸಿಕೊಳ್ಳುವ ಬಗ್ಗೆ ಚಿತ್ರದುರ್ಗ ಆಯುಷ್ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.

ಪ್ರತಿನಿತ್ಯ ಆಹಾರದಲ್ಲಿ ತುಳಸಿ, ಅರಿಶಿಣ, ಶುಂಠಿ, ದಾಲ್ಚಿನ್ನಿ, ಕಾಲುಮೆಣಸುನಂತಹ ಪದಾರ್ಥಗಳನ್ನು ಹೆಚ್ಚು ಬಳಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಅಲ್ಲದೆ ನಮ್ಮ ದೇಹಕ್ಕೆ ವೈರಾಣು ಹರಡುವುದನ್ನು ತಪ್ಪಿಸುತ್ತದೆ. ಮುಂಜಾನೆ 10 ಗ್ರಾಂ ಚವನ ಪ್ರಾಶ್ ಸೇವಿಸುವುದರಿಂದ ಅಲರ್ಜಿ, ಕೆಮ್ಮು, ನೆಗಡಿಯಂತಹ ರೋಗಗಳಿಂದ ದೂರವಿರಬಹುದು.

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲಾಯಿತು. ಅರ್ಧ ಗಂಟೆಗೊಮ್ಮೆ ಕೈಗಳನ್ನು ಸಾಬೂನಿನಿಂದ ಅಥವಾ ಹ್ಯಾಂಡ್‍ವಾಷ್‍ನಿಂದ ತೊಳೆದುಕೊಳ್ಳಬೇಕು. ರಸ್ತೆಯಲ್ಲಿ ಉಗುಳಬಾರದು. ಬಿಸಿಯಾದ ನೀರು ಆಹಾರ ಸೇವಿಸಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಕಡ್ಡಾಯವಾಗಿ ಬಳಕೆ ಮಾಡಬೇಕು. ಅಗತ್ಯ ವಸ್ತುಗಳನ್ನು ಕೊಳ್ಳುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಿ ವ್ಯವಹಾರ ನಡೆಸುವುದು ಉತ್ತಮ. ಕೆಮ್ಮು, ನೆಗಡಿ ಲಕ್ಷಣಗಳು ಕಾಣಿಸಿಕೊಂಡರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ, ಜ್ವರ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಔಷಧ ಪಡೆದುಕೊಳ್ಳಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್.ವಿಶ್ವನಾಥ್ ಹೇಳಿದರು.