ಚಿತ್ರದುರ್ಗ: ಚಳ್ಳಕೆರೆಯಲ್ಲಿ ದೇವರ ಎತ್ತುಗಳು ಎಂದು ಕರೆಸಿಕೊಳ್ಳುವ ರಾಸುಗಳು ಇವೆ. ಆ ದೇವರ ಎತ್ತುಗಳಿಗೆ ಮೇವಿಲ್ಲ.
ಕಳೆದ ಹಲವಾರು ವರ್ಷಗಳಿಂದ ಬರದಿಂದ ಬೆಂಡಾದ ಈ ಪ್ರದೇಶದ ಹಲವಾರು ಕಡೆ ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೂ ಸಹ ಮೇವಿನ ಕ್ಷಾಮ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೆಲವು ರೈತರು ತಮ್ಮ ಜಾನುವಾರುಗಳಿಗೆ ಎಲ್ಲಿಂದಲೋ ಸ್ವಲ್ಪ ಮೇವು ನೀಡಿ ಅವುಗಳನ್ನು ರಕ್ಷಿಸಿದ್ದಾರೆ. ಆದರೆ, ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿಯ ಸುಮಾರು ೩೦೦ಕ್ಕೂ ಹೆಚ್ಚು ಜಾನುವಾರುಗಳಿಗೆ ಕಳೆದ ಸುಮಾರು ೪ ತಿಂಗಳಿನಿಂದ ಮೇವಿಲ್ಲದೆ ನಿತ್ರಾಣವಾಗಿದ್ದು, ದೇವರ ಎತ್ತುಗಳು ದೇವರ ಪಾದಸೇರುವ ಹಂತ ತಲುಪಿದ್ದು ಈಗಾಗಲೇ ಸುಮಾರು ೧೦ಕ್ಕೂ ಹೆಚ್ಚು ರಾಸುಗಳು ಮೇವಿಲ್ಲದೆ ಉಪವಾಸದಿಂದ ಬಳಲಿ, ಬಳಲಿ ಸಾವನಪ್ಪುತ್ತಿವೆ.

ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿಯಲ್ಲಿ ಮ್ಯಾಸಬೇಡ ಬುಡಕಟ್ಟು ಸಮುದಾಯ ಜನರು ಹೆಚ್ಚಿದ್ದು ಅಲ್ಲಿನ ಮ್ಯಾಸನಾಯಕರು ತಲಾತಲಾಂತರದಿಂದ ದೇವರ ಹೆಸರಿನಲ್ಲಿ ಎತ್ತುಗಳನ್ನು ದೇವರ ಸೇವೆಗಾಗಿ ಬಿಡುವುದು ವಾಡಿಕೆ. ಹೀಗಾಗಿ ಆ ಭಾಗದ ಮ್ಯಾಸಬೇಡರು ತಮ್ಮ ಆರಾಧ್ಯ ದೈವದ ಹೆಸರಿನಲ್ಲಿ ಮನೆಯಲ್ಲೇ ಜನಿಸಿದ ರಾಸುಗಳನ್ನು ದೇವರಹಟ್ಟಿಗೆ ಅವರ ಕುಲದೇವರ ಹೆಸರಿನಲ್ಲಿ ನೀಡುತ್ತಾರೆ. ಈಗಾಗಲೇ ದೇವರಹಟ್ಟಿಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ರಾಸುಗಳಿದ್ದು, ಪ್ರತಿನಿತ್ಯ ಈ ರಾಸುಗಳಿಗೆ ಎರಡು ಹೊತ್ತಿನ ಮೇವುವನ್ನು ನೀಡಲು ರಾಸುಗಳನ್ನು ಕಾಯುವ ಕಿಲಾರಿಗಳಿಗೆ ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಗುರುವಾರ ದೇವರಹಟ್ಟಿಯ ದೇವರು ಎತ್ತುಗಳು ಇರುವ ಜಾಗಕ್ಕೆ ಭೇಟಿ ನೀಡಿದಾಗ ಸುತ್ತಲು ಎಲ್ಲೂ ಸಹ ಯಾವುದೇ ಮೇವು ಲಭ್ಯವಿರಲಿಲ್ಲ. ಉರಿಯುವ ಕೆಂಡದಂತಹ ಉರಿ ಬಿಸಿಲಿನಲ್ಲಿ ಉಪವಾಸದಿಂದ ರಾಸುಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಮೇವನ್ನು ಅರಿಸಿ ಸುತ್ತಮುತ್ತಲ ಗುಡ್ಡಗಳಲ್ಲಿ ತಿರುಗಾಡುತ್ತಿದ್ದವು. ಹೊಟ್ಟೆಗೆ ಮೇವು ಇಲ್ಲ, ಕುಡಿಯಲು ನೀರೂ ಇಲ್ಲ ಇಂತಹ ಸ್ಥಿತಿಯಲ್ಲಿದ್ದ ಹಲವಾರು ರಾಸುಗಳನ್ನು ಕಿಲಾರಿಗಳು ತೋರಿಸಿ ಈಗಾಗಲೇ ತಾಲ್ಲೂಕು ಆಡಳಿತಕ್ಕೆ ಎರಡ್ಮೂರು ಬಾರಿ ಮನವಿ ನೀಡಿದ್ದು, ದೇವರ ಎತ್ತುಗಳಿಗೆ ಮೇವು ಒದಗಿಸುವಂತೆ ವಿನಂತಿಸಿದ್ದೇವೆ. ಆದರೆ, ಇದುವರೆಗೂ ಯಾವುದೇ ರೀತಿಯ ಮಾಹಿತಿ ಬಂದಿಲ್ಲ.
ಇಲ್ಲಿನ ಜಾನುವಾರುಗಳನ್ನು ಪ್ರಾಣಾಪಾಯದಿಂದ ಪಾರು ಮಾಡುವ ಉದ್ದೇಶದಿಂದ ಇಲ್ಲಿನ ಹಿರಿಯರನ್ನು ಸಂಪರ್ಕಿಸಿ

ರಾಮಚಂದ್ರಾಪುರದ ಪೂಜ್ಯ ಗುರುಗಳಿಗೆ ಮೇವು ಒದಗಿಸುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ಬಾರಿ ದೇವರ ಎತ್ತುಗಳಿಗೆ ಶ್ರೀಮಠದಿಂದ ಮೇವನ್ನು ಒದಗಿಸಿಕೊಟ್ಟ ಬಾಳೆಮಂಡಿರಾಮದಾಸ್, ಸಿ.ಪಿ.ಮಹೇಶ್‌ಕುಮಾರ್ ಇವರಿಗೆ ವಿನಂತಿಸಲಾಗಿದೆ. ಶ್ರೀಮಠದಿಂದ ಮೇವು ಸಕಾಲದಲ್ಲಿ ದೊರಕಿದಲ್ಲಿ ಮಾತ್ರ ೩೦೦ ದೇವರ ಎತ್ತುಗಳ ಪ್ರಾಣವನ್ನು ಸಂರಕ್ಷಣೆ ಮಾಡಿದ ಪುಣ್ಯ ದೊರಕುತ್ತದೆ ಎಂದಿದ್ಧಾರೆ.

ದೇವರ ಎತ್ತುಗಳ ದಾರುಣ ಸ್ಥಿತಿಯನ್ನು ಕಂಡ ನಗರದ ಬಾಳೆಮಂಡಿ ವರ್ತಕ ವೆಂಕಟೇಶ್ ತಮ್ಮ ಬಾಳೆ ಮಂಡಿಯಿಂದಲೇ ಬಾಳೆ ಹಣ್ಣುಗಳನ್ನು ದೇವರ ಎತ್ತುಗಳಿಗೆ ನೀಡುವ ಮೂಲಕ ಕಿಲಾರಿಗಳಿಗೆ ದೈರ್ಯ ತುಂಬಿದ್ಧಾರೆ. ಕೃಷಿ ಇಲಾಖೆ ಮೇವು ಬೆಳೆಯುವ ಕುರಿತು ಕೆಲವೊಂದು ಯೋಜನೆ ರೂಪಿಸಿದ್ದು, ಅದನ್ನು ಈ ಸ್ಥಳದಲ್ಲಿ ಆಯೋಜಿಸಿ ಮೇವಿ ಬೆಳೆದು ರಾಸುಗಳಿಗೆ ಅನುಕೂಲ ಮಾಡಿಕೊಡುವ ಭರವಸೆಯನ್ನು ನೀಡಿದ್ಧಾರೆ.