ಚಿತ್ರದುರ್ಗ : ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದವರಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ಚಿತ್ರದುರ್ಗ ಜಿಲ್ಲೆಯ ಮೂವರು ಈ ಸಭೆಯಲ್ಲಿ ಭಾಗವಹಿಸಿರುವುದಾಗಿ ಮಾಹಿತಿ ತಿಳಿದುಬಂದಿದ್ದು, ಈ ಪೈಕಿ ಒಬ್ಬರು ದೆಹಲಿಯಲ್ಲಿಯೇ ಕ್ವಾರಂಟೈನ್ ಆಗಿದ್ದರೆ, ಉಳಿದ ಇಬ್ಬರನ್ನು ಚಿತ್ರದುರ್ಗ ಜಿಲ್ಲೆಯ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲೀಘ್ ಜಮಾತ್‍ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಹಾಗೂ ಅವರ ಸಂಪರ್ಕಿತರಲ್ಲಿ ಕೋವಿಡ್-19 ಸೋಂಕು ಹರಡಿರುವ ಬಗ್ಗೆ ಮಾಹಿತಿ ಇದೆ.  ಈ ಸಭೆಗೆ ಸಂಬಂಧಿಸಿದಂತೆ ಬಗ್ಗೆ ಸರ್ಕಾರ ನೀಡಿರುವ ಮಾಹಿತಿಯಂತೆ ಚಿತ್ರದುರ್ಗ ಜಿಲ್ಲೆಯ ಮೂವರ ವಿವರ ತಿಳಿದುಬಂದಿದೆ.  ಈ ಪೈಕಿ ಈಗಾಗಲೆ ಒಬ್ಬರು ದೆಹಲಿಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇದ್ದಾರೆ.  ಉಳಿದಂತೆ ಇನ್ನಿಬ್ಬರ ಪೈಕಿ ಒಬ್ಬರು ರೈಲ್ವೆ ಇಲಾಖೆಯ ನೌಕರರಾಗಿದ್ದು, ಇನ್ನೊಬ್ಬರು ಜಿಲ್ಲೆಯವರಾಗಿದ್ದಾರೆ.  ಈ ಇಬ್ಬರನ್ನೂ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಿ, ನಿಗಾ ವಹಿಸಲಾಗಿದೆ.  ಸದ್ಯ ಈ ಇಬ್ಬರಲ್ಲಿಯೂ ಸೋಂಕಿನ ಯಾವುದೇ ಲಕ್ಷಣ ಇಲ್ಲ.  ಆದಾಗ್ಯೂ ಈ ಇಬ್ಬರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದರು.  ಇದೇ ರೀತಿ ದೆಹಲಿಗೆ ಭೇಟಿ ನೀಡಿದ ಜಿಲ್ಲೆಯ ಯಾವುದೇ ವ್ಯಕ್ತಿಗಳಿದ್ದಲ್ಲಿ, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.  ಇಂತಹವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಕೂಡ ಮಾಹಿತಿ ನೀಡಿ ಸಹಕರಿಸಬೇಕು ಎಂದರು.