ಚಿತ್ರದುರ್ಗ: ರಂಗಭೂಮಿ ಕಲಾವಿದರನ್ನು ಬೆಳೆಸಿದ ನಾಡು ಚಿತ್ರದುರ್ಗದಲ್ಲಿ ರಂಗ ಕಲಾವಿದರನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರೇಕ್ಷಕರುಗಳ ಮೇಲಿದೆ ಎಂದು ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಹೇಳಿದರು.

ಬಹುಮುಖಿ ಕಲಾ ಕೇಂದ್ರ, ಕರ್ನಾಟಕ ನಾಟಕ ಅಕಾಡೆಮಿ, ಕಾರಂಜಿ ಕಲ್ಚರಲ್ ಟ್ರಸ್ಟ್, ರಚನಾ ಹವ್ಯಾಸಿ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಮಂಗಳವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಿಗರ ಆರಾಧ್ಯ ದೈವ ಪದ್ಮಭೂಷಣ ಡಾ.ರಾಜ್‌ಕುಮಾರ್ ಕೂಡ ಚಿತ್ರದುರ್ಗದಲ್ಲಿ ರಂಗಭೂಮಿಯ ಮೂಲಕವೇ ಅಭಿನಯ ಆರಂಭಿಸಿ ಮೇರು ನಟರಾಗಿ ಬೆಳೆದರು ಎನ್ನುವುದಾದರೆ ಚಿತ್ರದುರ್ಗಕ್ಕೂ ರಂಗಭೂಮಿಗೂ ಅಘಾದವಾದ ನಂಟಿದೆ ಎಂದರು.

ಮರ್ಚೆಂಟ್ ಆಫ್ ವೆನ್ನಿಸ್, ಮ್ಯಾಕ್‌ಬಥ್, ಒಥೆಲೋ ಇವುಗಳೆಲ್ಲಾ ಗ್ರೀಕ್ ಮಾದರಿಯ ಅದ್ಬುತ ನಾಟಕಗಳು. ನಾಟಕ ರಚನೆಯಲ್ಲಿ ಅಮೋಘವಾದ ಜ್ಞಾನವುಳ್ಳವರಾಗಿದ್ದ ಸಿ.ಜಿ.ಕೆ.ಯನ್ನು ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಸ್ಮರಿಸಿಕೊಳ್ಳಲೇಬೇಕು. ರಂಗಭೂಮಿಯಲ್ಲಿ ನಿಷ್ಠೆ, ಸತ್ಯ, ಪ್ರಾಮಾಣಿಕವಾಗಿ ತೊಡಗಿಕೊಂಡವರು ಒಂದಲ್ಲ ಒಂದು ದಿನ ಬಹಳ ಎತ್ತರಕ್ಕೆ ಬೆಳೆಯಬಹುದು. ರಂಗಭೂಮಿ ನಿಜಕ್ಕೂ ಜೀವನದ ಥಿಯೇಟರ್ ಇದ್ದಂತೆ ಎಂದು ತಿಳಿಸಿದರು.

ರಚನಾ ಹವ್ಯಾಸಿ ಕಲಾ ಸಂಘದ ಎಂ.ಸಿ.ಮಂಜುನಾಥ್ ಮಾತನಾಡಿ ಚಿತ್ರದುರ್ಗದಲ್ಲಿ ರಂಗಭೂಮಿ ಬೆಳೆದು ಉಳಿಯಬೇಕಾದರೆ ತಿಂಗಳಿಗೆ ಕನಿಷ್ಠ ಮೂರ್‍ನಾಲ್ಕು ನಾಟಕಗಳನ್ನಾದರೂ ಪ್ರದರ್ಶಿಸಬೇಕು. ಅದಕ್ಕಾಗಿ ನನ್ನ ಸಂಪೂರ್ಣ ಸಹಕಾರವಿದೆ. ಯುವ ರಂಗಕಲಾವಿದರನ್ನು ಬೆಳೆಸಬೇಕಾಗಿರುವುದರಿಂದ ಪ್ರೇಕ್ಷಕರು ಹೆಚ್ಚು ಹೆಚ್ಚಾಗಿ ನಾಟಕಗಳನ್ನು ವೀಕ್ಷಿಸಿ ಎಂದು ವಿನಂತಿಸಿದರು.

ಬಹುಮುಖಿ ಕಲಾ ಕೇಂದ್ರದ ಟಿ.ಮಧು, ಕಾರಂಜಿ ಕಲ್ಚರಲ್ ಟ್ರಸ್ಟ್‌ನ ಶ್ರೀನಿವಾಸ್‌ಮೂರ್ತಿ, ಸಂಗೀತ ಕಲಾವಿದ ಹೊಸದುರ್ಗದ ಓ.ಮೂರ್ತಿ, ಧೀಮಂತ್, ಇನ್ಫೆಂಟ್ ವಿನಯ್ ವೇದಿಕೆಯಲ್ಲಿದ್ದರು.
ಜಿ.ಪಿ.ರಾಜರತ್ನಂ, ಪಿ.ಲಂಕೇಶ್, ಶಂಕರ್ ಶೇಷ ರಚಿಸಿರುವ ಬಾಹುಬಲಿಯ ವಿಜಯಂ, ಗುಣಮುಖ, ಇರುಳು ಹಗಲಾಗುವುದರೊಳಗೆ ನಾಟಕಗಳು ಪ್ರದರ್ಶನಗೊಂಡವು.