ಚಿತ್ರದುರ್ಗ: ಇಲ್ಲಿನ ಎಸ್.ಬಿ.ಐ.(ಎಸ್.ಬಿ.ಎಂ.) ರಸ್ತೆ ತಗ್ಗು ಗುಂಡಿಗಳಿಂದ ಕೂಡಿರುವುದನ್ನು ಕೂಡಲೆ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಏಕಾಂಗಿಯಾಗಿ ರಸ್ತೆಯ ಗುಂಡಿಯಲ್ಲಿ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದರು.

ಎಸ್.ಬಿ.ಐ.ರಸ್ತೆಯಿಂದ ಹೊರಪೇಟೆ ಹಾಗೂ ಬಸವೇಶ್ವರ ಟಾಕೀಸ್ ಕಡೆ ಹೋಗುವ ರಸ್ತೆಯಲ್ಲಿ ಗುಂಡಿಗಳೆ ರಸ್ತೆಯಾಗಿದೆ. ಇಲ್ಲಿ ಚಲಿಸುವ ದ್ವಿಚಕ್ರ ವಾಹನ, ಆಟೋ, ಕಾರು ಸರ್ಕಸ್ ಮಾಡಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರು ಅನಾಹುತವಾಗುವುದು ಗ್ಯಾರೆಂಟಿ. ಮಳೆ ಬಂತೆಂದರೆ ಇಲ್ಲಿನ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಗುಂಡಿಗಳು ಇರುವುದು ಗೊತ್ತೇ ಆಗುವುದಿಲ್ಲ. ತುರ್ತಾಗಿ ಈ ರಸ್ತೆಯನ್ನು ದುರಸ್ಥಿಪಡಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದೆ ರಸ್ತೆಯ ಗುಂಡಿಯಲ್ಲಿ ದಿನವಿಡಿ ಮಲಗಿ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಗಣೇಶ್ ಎಚ್ಚರಿಸಿದ್ದಾರೆ.