ಚಿತ್ರದುರ್ಗ: ಜನಾಂಗೀಯ ಘರ್ಷಣೆ ವಿರುದ್ದ ಹೋರಾಡಿ ಅರ್ಧ ಜೀವನವನ್ನು ಜೈಲಿನಲ್ಲಿಯೇ ಕಳೆದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲ ಅವಮಾನ, ಸಂಕಟ, ನಿಂದನೆ ನೋವುಗಳನ್ನು ಅನುಭವಿಸಿದರೂ ಎಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಸಮಾಜ ಸುಧಾರಕರ ಜೀವನ ಕತ್ತಿ ಮೇಲೆ ನಡೆದಂತೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಬಾಪೂಜಿ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ನೋಬೆಲ್ ಪ್ರಶಸ್ತಿ ಪುರಸ್ಕøತ ನೆಲ್ಸನ್ ಮಂಡೇಲಾರವರ ನೂರನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಬದುಕು ಸಂಕೀರ್ಣತೆಯಿಂದ ಕೂಡಿದೆ. ಸಮಾಜ ಸುಧಾರಣೆಗೆ ವೈಚಾರಿಕ ಕಿರಣ ಬೀರಲು ದಾರ್ಶನಿಕರು, ಸಮಾಜ ಸುಧಾರಕರು, ಮಾನವತಾವಾಧಿಗಳು ಜನರ ನಡುವೆ ಬಂದು ಸುಧಾರಣೆಗೆ ಶ್ರಮಿಸುತ್ತಾರೆ. ಅದೇ ರೀತಿ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ವರ್ಣ, ಜಾತಿ, ವರ್ಗ, ಲಿಂಗ ಭೇದದ ವಿರುದ್ದ ಹೋರಾಡಿ ಮೂರು ದಶಕಗಳನ್ನು ಜೈಲಿನಲ್ಲಿಯೇ ಕಳೆಯುತ್ತಾರೆ ಎಂದರೆ ಸುಲಭದ ಮಾತಲ್ಲ. ಜಗತ್ತಿನಲ್ಲಿ ಕೆಲವರು ಸಾಮಾಜಿಕ ಆರೋಗ್ಯವನ್ನು ಕೆಡಿಸಲು ಜೀವನವನ್ನು ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿದಾರಿಗೆ ತರಲು ಜೀವನವನ್ನೇ ಮುಡುಪಾಗಿಡುತ್ತಾರೆ. ಅಂತಹವರ ಸಾಲಿಗೆ ಸೇರಿದವರು ನೆಲ್ಸನ್ ಮಂಡೇಲಾ ಎಂದು ಗುಣಗಾನ ಮಾಡಿದರು.
ವೈರುದ್ಯ ಎಲ್ಲರ ಬದುಕಿನಲ್ಲಿಯೂ ಸರ್ವೆ ಸಾಮಾನ್ಯ. ವೈರುದ್ಯದಿಂದ ವೈವಿದ್ಯತೆ ಕಡೆಗೆ ಬರುವ ಪ್ರಯತ್ನವನ್ನು ಮಾಡಬೇಕು. ಗಾಂಧಿ, ಏಸು, ಬುದ್ದ, ಬಸವ, ಪೈಗಂಬರ್ ಇವರುಗಳೆಲ್ಲಾ ವೈರುದ್ಯದಿಂದ ವೈವಿದ್ಯತೆ ಕಡೆಗೆ ಬಂದವರು. ವೈವಿದ್ಯತೆ ಕಡೆಗೆ ಸಾಗುವ ಹಾದಿ ಕಠಿಣವಾದುದು. ಕಲ್ಲು-ಮುಳ್ಳುಗಳಿಂದ ಕೂಡಿರುತ್ತದೆ. ಅವಮಾನ, ಸವಾಲು, ಸಮಸ್ಯೆ ಎದುರಾಗುತ್ತದೆ. ಎಲ್ಲವನ್ನು ತಡೆದುಕೊಂಡು ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಶಾಂತಿಯಿಂದ ಇರಬೇಕು ಎಂದು ತಿಳಿಸಿದರು.
ವರ್ಣ ಭೇದದ ವಿರುದ್ದ ಹೋರಾಡುವಾಗ ನೆಲ್ಸನ್ ಮಂಡೇಲಾ ಸಾಮಾಜಿಕ ಕಿರುಕುಳವನ್ನು ಅನುಭವಿಸಿದ್ದಾರೆ. ಜೈಲಿನಲ್ಲಿ ಇರಲು ಆಗದೆ ಭಾರತದಲ್ಲಿ 1499 ಜನ ಪ್ರಾಣ ಕಳೆದುಕೊಂಡಿದ್ದಾರೆ. ನಲ್ಸನ್ ಮಂಡೇಲಾ 30 ವರ್ಷಗಳನ್ನು ಜೈಲಿನಲ್ಲಿ ಸವೆಸಿದ್ದಾರೆ ಎಂದರೆ ಯಾರು ಊಹಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ದಕ್ಷಿಣ ಆಫ್ರಿಕಾದ ಗಾಂಧಿ ಎಂದೆ ಹೆಸರುವಾಸಿಯಾಗಿದ್ದ ಮಂಡೇಲಾರವರ ತತ್ವ ಆದರ್ಶಗಳನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ಕೆ.ಎಂ.ಎಸ್.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಂಜುನಾಥ್ ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ದೂರ ಶಿಕ್ಷಣ ಸಂಯೋಜಕರಾದ ಪ್ರೊ.ಎ.ಎಂ.ರುದ್ರಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈ.ಮಹೇಶ್‍ಬಾಬು, ವೆಂಕಟರಾಂ ವೇದಿಕೆಯಲ್ಲಿದ್ದರು.
ಮಹಡಿ ಶಿವಮೂರ್ತಿ, ಗಣೇಶಯ್ಯ, ಬಿ.ಇ.ಡಿ.ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.