ಚಿತ್ರದುರ್ಗ: ನಾಯಕನಹಟ್ಟಿಯಲ್ಲಿ ತ್ರಿವಳಿ ಕೊಲೆಗೈದು ನಾಗರೀಕ ಸಮಾಜವನ್ನೆ ಬೆಚ್ಚಿಬೀಳಿಸಿ ತಲೆಮರೆಸಿಕೊಂಡಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ರಾಧಿಕ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಕ್ಷಣಾಧಿಕಾರಿ ಜಿ.ರಾಧಿಕ ಚಳ್ಳಕೆರೆ ತಾಲ್ಲೂಕು ನಾಯಕನಟ್ಟಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪಟ್ಟಣ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಹಂದಿಗಳನ್ನು ಸಾಕಿಕೊಂಡಿದ್ದ ಸೀನಪ್ಪ(೫೩) ಈತನ ಮಗ ಯಲ್ಲೇಶ(೨೨) ಸೀನಪ್ಪನ ತಮ್ಮನ ಮಗ ಮಾರೇಶ(೨೩) ಇವರುಗಳನ್ನು ಕೋಲು ಕಲ್ಲುಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿ ಹಂದಿಗಳನ್ನು ಕಳುವು ಮಾಡಿಕೊಂಡು ಹೋಗಿದ್ದ ರಾಣೆಬೆನ್ನೂರಿನ ಸಹೋದರರಾದ ಸಿದ್ದಪ್ಪ, ಮಂಜಪ್ಪ, ಸುರೇಶ ಹಾಗೂ ಮಾರುತಿ, ಚೌಡಪ್ಪ, ಕೃಷ್ಣ ಇವರುಗಳನ್ನು ರಾಣೆಬೆನ್ನೂರಿನಲ್ಲಿ ಬಂಧಿಸಿರುವ ನಮ್ಮ ತಂಡ ಕೊಲೆಗೆ ಬಳಸಲಾದ ಆರು ಕೋಲು, ಐದು ಮೊಬೈಲ್, ಹಂದಿಗೆ ಹಾಕುವ ಎರಡು ಬಲೆ, ಒಂದು ತಡಿಕೆ, ನಾಲ್ಕು ಹಂದಿಗಳು ಮತ್ತು ಅಶೋಕ ಲೈಲಾಂಡ್ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದು, ಕೊಲೆ ಆರೋಪಿಗಳು ಕಳುವು ಮಾಡಿದ್ದ ಹಂದಿಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಹೋಗಿರುವ ಇಬ್ಬರನ್ನು ಬಂಧಿಸಬೇಕಿದೆ ಎಂದು ವಿವರಿಸಿದರು.

ಕೊಲೆಪಾತಕಿಗಳಲ್ಲಿ ಸಿದ್ದಪ್ಪ, ಮಂಜಪ್ಪ, ಸುರೇಶ್ ಇವರುಗಳು ಅಣ್ಣ ತಮ್ಮಂದಿರಾಗಿದ್ದು, ಇವರ ಇಬ್ಬರು ಅಕ್ಕಂದಿರಾದ ಮಂಜಮ್ಮ, ದುರ್ಗಮ್ಮ ಇವರುಗಳು ನಾಯಕನಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಕೊಲೆ ಆರೋಪಿಗಳು ಆಗಿಂದಾಗ್ಗೆ ಅಕ್ಕನ ಮನೆಗೆ ಹೋಗಿ ಬರುತ್ತಿದ್ದು, ರಾಣೆಬೆನ್ನೂರಿನಿಂದ ನಾಯಕನಟ್ಟಿಗೆ ಹಂದಿಗಳನ್ನು ಸಾಗಿಸಿ ಅಲ್ಲಿಯೂ ವ್ಯಾಪಾರ ವಿಸ್ತರಿಸಬೇಕೆಂಬ ಉದ್ದೇಶ ಹೊಂದಿದ್ದರೆಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಕೊಲೆ ಆರೋಪಿಗಳು ಮತ್ತು ಕೊಲೆಗೀಡಾದ ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದುದೆ ಕೊಲೆಗೆ ಕಾರಣವೆಂದು ತಿಳಿದು ಬಂದಿದೆ. ಕೊಲೆಗೂ ಮುಂಚೆ ಒಂದು ವಾರದ ಹಿಂದೆ ಸಂಚು ರೂಪಿಸಿಕೊಂಡು ಆರು ಮಂದಿ ದುಷ್ಕರ್ಮಿಗಳು ಖಾರದಪುಡು, ಕೋಲು, ಮಂಕಿ ಕ್ಯಾಪ್‌ಗಳನ್ನು ಖರೀಧಿಸಿದ್ದರು ಎಂದು ರಕ್ಷಣಾಧಿಕಾರಿ ತಿಳಿಸಿದರು.

ಕೊಲೆಗಡುಕರ ಪತ್ತೆಗಾಗಿ ಹೆಚ್ಚುವರಿ ರಕ್ಷಣಾಧಿಕಾರಿ ನೇತೃತ್ವದಲ್ಲಿ ಹತ್ತು ತಂಡಗಳನ್ನು ರಚಿಸಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ೧೫೦ ಮಂದಿ ಕೊರೋನಾವನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಹಾವೇರಿ, ರಾಣೆಬೆನ್ನೂರು, ಚಿಕ್ಕಮಗಳೂರು, ಹಾಸನ, ದಾವಣಗೆರೆ ಹಾಗೂ ನೆರೆ ರಾಜ್ಯ ಆಂಧ್ರದ ಅನಂತಪುರಕ್ಕೂ ತೆರಳಿ ಕೊಲೆಗಡುಕರ ಪತ್ತೆಗೆ ಶ್ರಮಿಸಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿರುವುದಾಗಿ ಹೇಳಿದರು.

ಹೆಚ್ಚುವರಿ ರಕ್ಷಣಾಧಿಕಾರಿ ಮಹಾನಿಂಗ ಬಿ.ನಂದಗಾಂವಿ, ಹಿರಿಯೂರು ಡಿ.ವೈ.ಎಸ್ಪಿ. ರೋಷನ್ ಜಮೀರ್, ಇನ್ಸ್‌ಪೆಕ್ಟರ್‌ಗಳಾದ ಇ.ಆನಂದ್, ರಮಾಕಾಂತ್, ಜಿ.ಬಿ.ಉಮೇಶ್, ರಾಘವೇಂದ್ರ, ರುದ್ರಪ್ಪ, ಸಬ್‌ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ, ರಾಜು, ಎ.ಮಂಜುನಾಥ, ಲಿಂಗಾರೆಡ್ಡಿ, ರಾಘವೇಂದ್ರ, ಎಸ್.ರಘುನಾಥ್, ಸತೀಶ್ ಮತ್ತು ಕೊಲೆಗಾರರ ಪತ್ತೆಗೆ ರಚಿಸಲಾಗಿದ್ದ ಹತ್ತು ತಂಡದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.