ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಸೇಂಗಾ, ಕಡ್ಲೆ, ತೊಗರಿ ಹಾಗೂ ರಾಗಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಭಾನುವಾರ ಕೖಷಿ ಸಚಿವ ಬಿ.ಸಿ.ಪಾಟೀಲ್ ಆವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಹಿರೇಕೆರೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗದ ಮಧ್ಯೆ ಚಿತ್ರದುರ್ಗದಲ್ಲಿ  ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು ಅವರನ್ನೊಳಗೊಂಡ ನಿಯೋಗ ಸಚಿವರನ್ನು ಭೇಟಿ ಮಾಡಿ ಚರ್ಚಿಸಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಹಾರ ಧಾನ್ಯಗಳ ಕನಿಷ್ಟ ಸಾಮಾನ್ಯ ವೆಚ್ಚವನ್ನಾದರೂ ಸರಿದೂಗಿಸಲು ಬೆಂಬಲ ಬೆಲೆ ಮೂಲಕ  ಖರೀದಿ ಕೇಂದ್ರಗಳ ತೆರೆದು  ರೈತರ ಬದುಕಿಗೆ ಆಧಾರ ನೀಡುತ್ತಿರುವುದು ಸ್ವಾಗತಾರ್ಹ. ಆದರೆ  ಎಲ್ಲ ಜಿಲ್ಲೆಗಳಲ್ಲಿಯೂ ಎಲ್ಲ ಘೋಷಿತ ಬೆಳೆಗಳ ಖರೀದಿ ಕೇಂದ್ರ ತೆರೆಯದಿರುವುದು ರೈತರಿಗೆ ಅನಾನುಕೂಲವಾಗಿದೆ ಎಂಬ ಸಂಗತಿಯನ್ನು ಸಚಿವರ ಗಮನಕ್ಕೆ ತರಲಾಯಿತು.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾವಿರಾರು ರೈತರು ಶೇಂಗಾ, ಕಡಲೆ, ತೊಗರಿ ಮತ್ತು  ರಾಗಿ ಧಾನ್ಯಗಳ ಬೆಳಿದಿದ್ದು ಖರೀದಿ ಕೇಂದ್ರ ತೆರೆಯದೇ ಇರುವುದು  ಸಮಸ್ಯೆಯಾಗಿದೆ. ವಿಳಂಬ ಮಾಡದೆ ಖರೀತಿ ಕೇಂದ್ರ ತೆರೆಯುವ ಅಗತ್ಯವಿದೆ. ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಲು ನಿಗದಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲವೆಂಬ ತಾಂತ್ರಿಕ ಕಾರಣಳ ಮುಂದೊಡ್ಡಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇದು ಜಿಲ್ಲೆಯ ರೈತರಿಗೆ ತುಂಬಾ ಅನ್ಯಾಯ ಮಾಡಿದಂತಾಗುತ್ತದೆ. ಚಳ್ಳಕೆರೆಯಲ್ಲಿ ಶೇಂಗಾ ಹಾಗೂ ತೊಗರಿ ಖರೀದಿ ಕೇಂದ್ರ ತೆರೆಯಲು  ಅಧಿಕಾರಿಗಳಿಗೆ ಸೂಚನೆ ನೀಡುವುದರ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಲಾಯಿತು.

ಇದುವರೆಗೂ ಬೆಂಬಲ ಬೆಲೆಗಿಂತ ಜಾಸ್ತಿ ಇದ್ದ ಮೆಕ್ಕೇಜೋಳದ ಬೆಳೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮೆಕ್ಕೋಜಳ ಖರೀದಿ ಕೇಂದ್ರ ತೆರೆಯಲು ತಕ್ಷಣ ಮುಂದಾಗಬಬೇಕು. ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಅಧಿಕಾರಿಗಳಿಗ ನಿರ್ದೇಶನ ನೀಡಬೇಕೆಂದು ವಿನಂತಿಸಲಾಯಿತು.

ಮನವಿ ಪತ್ರ ಸ್ವೀಕರಿಸಿದ ಸಚಿವ ಬಿ.ಸಿ.ಪಾಟೀಲ್ ಖರೀದಿ ಕೇಂದ್ರ ತೆರೆಯುವ ಸಂಬಂಧ ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಧಿವೇಷನ ಮುಗಿದ ನಂತರ ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ರೈತರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಅಗತ್ಯ ಬಿದ್ದಲ್ಲಿ ರೈತರೋರ್ವರ ಮನೆಯಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,  ಮುದ್ದಾಪುರ ನಾಗರಾಜು, ಎಂ.ಬಿ.ತಿಪ್ಪೇಸ್ವಾಮಿ, ಪ್ರವೀಣ್ ಕುಮಾರ್ , ಹಂಪಯ್ಯನಮಾಳಿಗೆ ಧನಂಜಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.