ಚಿತ್ರದುರ್ಗ: ಶೋಷಣೆ ಅದೊಂದು ಯಾತನೆ. ಶೋಷಣೆ ಮತ್ತು ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ದೊರಕುವಂತಾಗಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಸವಕೇಂದ್ರ ಶ್ರೀಮುರುಘಾಮಠ, ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಜಿಲ್ಲಾ ಬಸವಕೇಂದ್ರ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ವಿಷಯ ಕುರಿತು ಮಾತನಾಡಿದ ಶ್ರೀಗಳು, ಶೋಷಣೆ ಜೀವನವಿಡೀ ವೇದನೆಯಾಗಿ ಇಂದಿಗೂ ಕೂಡ ಸಮಾಜದಲ್ಲಿ ಸತಾಯಿಸುತ್ತಿರುವ ರೋಗವಾಗಿದೆ ಎಂದರು.
ಬುದ್ಧ ಅಮಾನವೀಯ ಆಚರಣೆಗಳನ್ನು ನಿಲ್ಲಿಸಿದರು. ನಂತರ ಬಸವಣ್ಣ ಈ ಸಾಲಿನಲ್ಲಿ ಬಂದು ನಿಂತರು. ಶ್ರೇಣೀಕೃತವಾದ ಸಮಾಜ ಇತ್ತು. ನಾಲ್ಕು ವರ್ಗಗಳಿದ್ದವು. ಶೂದ್ರನ ಸ್ಥಾನಮಾನ ಮೇಲ್ವರ್ಗದವರ ಸೇವೆ ಮಾಡುವುದೇ ಆಗಿತ್ತು. ಇಂತಹ ಅಸಹನೀಯ ಪರಿಸ್ಥಿತಿ ಇತ್ತು. ಕುಲಹದಿನೆಂಟು ಜಾತಿಯವರೆಲ್ಲರೂ ಒಂದಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. ಶರಣರು ಎಂದಿಗೂ ಪಲಾಯನವಾದಿಗಳಲ್ಲ. ಹಾಗಾಗಿ ಅಂದು ಸಾಮೂಹಿಕ ಹೋರಾಟಕ್ಕೆ ಧುಮುಕಿದವರು. ಇಂದಿನ ಮಹಿಳೆಯರ ಸಬಲೀಕರಣ ಅಂದಿನ ಮಹಿಳೆಯರ ವಿಮೋಚನೆ. ಮಾನವನ ಜ್ವಲಂತ ಸಮಸ್ಯೆಗಳು ಇಂದಿಗೂ ಇವೆ. ಬುದ್ಧ, ಬಸವ, ಏಸು, ಪೈಗಂಬರ್, ಅಂಬೇಡ್ಕರ್, ಗಾಂಧೀಜಿಯವರ ಚಿಂತನೆಗಳನ್ನು ಬಿತ್ತಬಹುದು. ಆದರೆ ನಾವು ಅವರಾಗಲು ಸಾಧ್ಯವಿಲ್ಲ. ಕಾರಣ ಅಂತಹ ಮೂಲಭೂತ ಸಮಸ್ಯೆಗಳನ್ನು ಎತ್ತಿ ಹೋರಾಟ ನಡೆಸಿದ್ದಾರೆ. ಅಂತಹ ಸಮಸ್ಯೆಗಳು ಇಂದು ಇಲ್ಲವಾದ್ದರಿಂದ ಅವರಂಥಾಗಲು ಸಾಧ್ಯವಿಲ್ಲ. ಅವರ ಮಾರ್ಗದಲ್ಲಿ ನಡೆಯುವುದರಿಂದ ಅವರನ್ನು ನೆನಪಿಸಬಹುದು.
ವೈದಿಕ ಆಚರಣೆಗಳು: ಕೆಲವರಿಗೆ ಧರ್ಮ, ಸಿದ್ಧಾಂತ ಇವು ಯಾವುವು ರುಚಿಸುವುದಿಲ್ಲ. ಈ ಆಚರಣೆಗಳನ್ನು ಕೆಲವರು ಧರ್ಮ ಎಂದು ಆಚರಿಸುತ್ತಾರೆ. ಇವು ಆಧ್ಯಾತ್ಮಿಕತೆಗಿಂತಲು ಮುಖ್ಯವಾಗಿ ವಿಜೃಂಬಿಸುತ್ತಿದ್ದವು. ಅವರು ವೈದಿಕ ಆಚರಣೆಯಲ್ಲಿ ಎಲ್ಲದನ್ನೂ ಕಾಣುತ್ತಾರೆ.
ಮಾನವೀಯ ಮೌಲ್ಯಗಳು : ನಾವು ಮಾನವೀಯ ಮೌಲ್ಯಗಳನ್ನು ಆಚರಿಸಬೇಕು. ೨೧ನೇ ಶತಮಾನದಲ್ಲಿ ಮಾನವ ಮಾನವನಾಗಿ ಉಳಿಯಬೇಕಾದರೆ ಮಾನವೀಯ ಮೌಲ್ಯಗಳನ್ನು ಅನುಸರಿಸಬೇಕು. ನಮ್ಮೊಳಗೆ ಮೌಲ್ಯಗಳು ವಿಜೃಂಭಿಸಬೇಕು. ನಮ್ಮೊಳಗೆ ಅಂತಹ ಮಾನವ ಉದಯಿಸಬೇಕು. ನಾವು ಕೃತಿಯಲ್ಲಿ ಮತ್ತು ಆಕೃತಿಯಲ್ಲಿ ಮಾನವರಾಗಬೇಕು ಎಂದರು.
ವಿಷಯಾವಲೋಕನ ಮಾಡಿದ ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಜಿ.ವಿ. ರಾಜಣ್ಣ, ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಗುರುಸ್ವಾಮಿ ಮಾತನಾಡಿದರು. ಶ್ರೀ ಬಸವಕಿರಣ ಸ್ವಾಮಿಗಳು, ಕೇತೇಶ್ವರ ಮಠದ ಸ್ವಾಮಿಗಳು, ಎಸ್.ಕೆ.ಬಿ.ಪ್ರಸಾದ್, ಡಾ. ಕೃಷ್ಣಪ್ಪ, ಆರ್. ಮಲ್ಲಿಕಾರ್ಜುನಯ್ಯ, ಪತ್ರಕರ್ತ ಜಿ.ಎಸ್. ಉಜ್ಜನಪ್ಪ, ಎ.ವಿಜಯಕುಮಾರ್ ಮುಂತಾದವರಿದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಬಿ.ವಿ. ವಿಶ್ವನಾಥ್ ಸ್ವಾಗತಿಸಿದರು. ನಾಗರಾಜ್ ಸಂಗಮ್ ವಂದಿಸಿದರು. ಹುರಳಿ ಬಸರಾಜ್ ನಿರೂಪಿಸಿದರು.