ಹಿರಿಯೂರು: ತಾಲೂಕಿನ ರಂಗನಾಥಪುರ ಗ್ರಾಮದ ರೈತ ನಾಗರಾಜು ಎಂಬುವರು ಹೊಲದಲ್ಲಿ ದಾಸ್ತಾನು ಮಾಡಿದ್ದ ಸುಮಾರು ೪೦ ಲಕ್ಷಕ್ಕೂ ಅಧಿಕ ಮೌಲ್ಯದ ಕೊಬ್ಬರಿ ಬೆಂಕಿ ಆಕಸ್ಮಿಕದಲ್ಲಿ ಭಸ್ಮಗೊಂಡ ಬಗ್ಗೆ ಕಂದಾಯ, ಪೊಲೀಸ್ ಹಾಗೂ ತೋಟಗಾರಿಕೆ ಇಲಾಖೆಗಳು ಎಚ್ಚರಿಕೆಯಿಂದ ತನಿಕೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬೆಂಕಿ ಆಕಸ್ಮಿಕದಲ್ಲಿ ಸುಮಾರು ೪೦ ಲಕ್ಷ ರೂ. ಮೌಲ್ಯದ ತೆಂಗಿನ ಕಾಯಿ ಕಳೆದುಕೊಂಡ ತಾಲೂಕಿನ ರಂಗನಾಥಪುರ ಗ್ರಾಮದ ನಾಗರಾಜಪ್ಪ ಅವರ ತೋಟಕ್ಕೆ ಸೋಮವಾರ ಭೇಟಿ ನೀಡಿ ಸಂತ್ರಸ್ತ ರೈತಗೆ ಸಾಂತ್ವನ ಹೇಳಿದರು.
ರೈತರ ಕಷ್ಟಕ್ಕೆ ಅಧಿಕಾರಿಗಳು ಮಾನವೀಯತೆಯಿಂದ ಸ್ಪಂದಿಸಿ. ತನಿಖೆ ನಡೆಸುವಾಗ, ವರದಿ ಸಿದ್ಧಪಡಿಸುವಾಗ ಪ್ರಾಮಾಣಿಕತೆ, ವಸ್ತುನಿಷ್ಠತೆಯಿಂದ ಕೆಲಸ ಮಾಡಿ. ತಾನು ರಾಜ್ಯದಲ್ಲಿ ಜರುಗುತ್ತಿರುವ ರೈತ ಆತ್ಮಹತ್ಯೆ ಹಾಗೂ ಇತರೆ ಸಮಸ್ಯೆ ಕುರಿತು ಜು.೨೧ರಂದು ಆರಂಭಗೊಳ್ಳುವ ಸಂಸತ್ ಅಧಿವೇಶನಲ್ಲಿ ಚರ್ಚಿಸುತ್ತೇನೆ. ರೈತನ ಬದುಕು ಇಂದು ತೀವ್ರ ಕಷ್ಟದಲ್ಲಿದೆ. ಖಾಸಗಿ ಲೇವಾದೇವಿಗಾರರು ರೈತರ ಮೇಲೆ ಪಡೆದ ಸಾಲಕ್ಕೆ ಒತ್ತಡ ಹಾಕಬೇಡಿ. ಜತೆಗೆ ಖಾಸಗಿಯವರಿಂದ ಪಡೆದ ಹಣಕ್ಕೆ ವಿಮೆ ಇರುವುದಿಲ್ಲ. ರೈತನ ಉತ್ಪನ್ನಗಳಾದ ಕೊಬ್ಬರಿಯಂತ ಪದಾರ್ಥಗಳಿಗೆ ವಿಮೆ ಇರುವುದಿಲ್ಲ. ವರದಿ ಸಿದ್ಧಪಡಿಸುವ ಅಧಿಕಾರಿಗಳು ಸಾಧ್ಯವಾದಲ್ಲಿ ರೈತಪರವಾದ ವರದಿ ನೀಡಿ ಎಂದು ಸೂಚಿಸಿದರು.
ರೈತ ನಾಗರಾಜಪ್ಪ ದೃತಿಗೆಡುವ ಅಗತ್ಯವಿಲ್ಲ. ಕೆಲವೊಮ್ಮೆ ಇಂತ ಆಕಸ್ಮಿಕಗಳು ಜರುಗುತ್ತವೆ. ರೈತ ಹೇಳುವ ಪ್ರಕಾರ ಈ ಪ್ರಕರಣದಲ್ಲಿ ಸುಮಾರು ೭೦ ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ. ಇಳಿವಯಸ್ಸು, ಅನಾರೋಗ್ಯದ ನಡುವೆಯೂ ರೈತರಿಗೆ ಸ್ಪಂದಿಸಬೇಕೆಂಬ ಹಂಬಲ ನನ್ನಲ್ಲಿ ಕುಂದಿಲ್ಲ. ಹಾಗಾಗಿ ದೂರದ ರಂಗನಾಥಪುರಕ್ಕೆ ಬಂದಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ವಿಶ್ವಾಸ ಕಳೆದುಕೊಂಡ ರೈತರು ಬೆಳೆದ ಬೆಳೆಗೆ ತಾವೇ ಕಿಚ್ಚು ಇಡುತ್ತಿದ್ದಾರೆ. ರೈತರ ದೃಷ್ಟಿಯಿಂದ ಇದು ಕಣ್ಣೀರು ತರುವ ಸಂಗತಿ. ಇಂತ ಘಟನೆಗಳು ಎಂತಹವರ ಮನಸ್ಸಿಗೂ ನೋವುಂಟು ಮಾಡುತ್ತದೆ. ರೈತ ಬೆಳೆದ ಕೊಬ್ಬರಿಗೆ ಬೆಂಕಿ ಬಿದ್ದಿರುವುದು ಮತ್ತೊಂದು ಘೋರ ದುರಂತವೇ ಸರಿ. ಇಂತ ಘಟನೆಗಳಿಂದ ಎಂತಹವರೂ ಅಧೈರ್ಯರಾಗುವರು. ಸರಕಾರ ಬೆಳೆಗೆ ನ್ಯಾಯಯುತ ಧಾರಣೆ ನಿಗದಿ ಪಡಿಸ ಕಾರಣಕ್ಕೆ ಉತ್ತಮ ಬೆಲೆ ಸಿಗಬಹುದೆಂಬ ಕಾರಣಕ್ಕೆ ಉತ್ಪನ್ನಗಳನ್ನು ದಾಸ್ತಾನು ಮಾಡುತ್ತಾರೆ. ಆದರೆ ಇಂತ ಘೋರ ದುರಂತ ಸಂಭವಿಸಿದಾಗ ಜರ್ಜರಿತರಾಗುತ್ತಾರೆ. ಸರಕಾರ ಸೂಕ್ತ ಬೆಲೆ ನಿಗಧಿ, ದಾಸ್ತಾನು ಮಾಡಲು ಮಾರುಕಟ್ಟೆ ಸೌಲಭ್ಯ ವ್ಯವಸ್ಥೆ ಮಾಡಿದ್ದರೆ ಇಂತ ಘಟನೆ ಜರುಗುವುದಿಲ್ಲ. ಸರಕಾರ ಉತ್ಪನ್ನಗಳ ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನೊಂದ ರೈತನ ನೋವಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಈಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ತಾಲೂಕಾಧ್ಯಕ್ಷ ಶಿವಪ್ರಸಾದ್‌ಗೌಡ, ಬಿ.ಎಚ್.ಮಂಜುನಾಥ್, ಮಹಮದ್‌ಫಕೃದ್ದಿನ್, ತಿಮ್ಮೇಗೌಡ, ಗ್ರಾಪಂ ಅಧ್ಯಕ್ಷ ರಾಮಯ್ಯ, ಸದಸ್ಯ ರವಿ, ತುಳಸಮ್ಮ, ಜಯಪ್ರಕಾಶ್, ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ, ಸದಸ್ಯ ದೇವರಾಜ್, ಗಿರಿಜಪ್ಪ, ಶಕೀಲ್‌ನವಾಜ್, ಗುಣಶೇಖರ್, ಶಂಕರಮೂರ್ತಿ, ಪಿಟ್ಲಾಲಿ ರವಿ, ಕುಬೇರಸ್ವಾಮಿ, ವಿಠಲ್, ನಾರಾಯಣಗೌಡ, ಕಾಶಾಮಯ್ಯ, ಚಿದಾನಂದಮೂರ್ತಿ, ಉಪತಹಶೀಲ್ದಾರ್ ರಾಜೇಶ್, ಡಿವೈಎಸ್‌ಪಿ ಸಂತೋಷ್, ಸಿಪಿಐ ಸುದರ್ಶನ್, ತೋಟಗಾರಿಕೆ ಸಹಾಯಕ ನಿರ್ದೆಶಕ ಡಾ.ಪಾಂಡುರಂಗಪ್ಪ, ರೈತ ಸಂಘದ ಅಧ್ಯಕ್ಷ ಹೊರಕೇರಪ್ಪ, ಸಿದ್ದರಾಮಣ್ಣ, ದಿವಾಕರ್ ಇತರರು ಉಪಸ್ಥಿತರಿದ್ದರು.