ಚಿತ್ರದುರ್ಗ:  ಕಳೆದ ವರ್ಷಕ್ಕೆ ಹೋಲಿಸಿದಾಗ, ಈ ವರ್ಷ ಜಿಲ್ಲೆಯಲ್ಲಿ ಡೆಂಗ್ಯು ಹಾಗೂ ಚಿಕುಂಗುನ್ಯಾ ರೋಗ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು, ಸೊಳ್ಳೆಗಳಿಂದ ಹರಡುವ ಈ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಮುದಾಯಕ್ಕೆ ಆರೋಗ್ಯ ಶಿಕ್ಷಣ ನೀಡಲು ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡೆಂಗ್ಯು, ಚಿಕುಂಗುನ್ಯಾ, ಮಲೇರಿಯಾ ರೋಗ ತಡೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೆಲವು ಪ್ರದೇಶಗಳನ್ನು ಡೆಂಗ್ಯೂ, ಚಿಕುಂಗುನ್ಯಾ ಹೆಚ್ಚು ಹರಡಬಹುದಾದ ಹೈರಿಸ್ಕ್ ಏರಿಯಾಗಳೆಂದು ಗುರುತಿಸಲಾಗಿದೆ.  ಈ ಪೈಕಿ ಚಿತ್ರದುರ್ಗ ನಗರದಲ್ಲಿ ಐಯುಡಿಪಿ ಬಡಾವಣೆ, ಮಾರುತಿನಗರ, ಬಡಾಮಕಾನ್, ದರ್ಜಿ ಕಾಲೋನಿ, ಜೋಗಿಮಟ್ಟಿ ರಸ್ತೆ, ಮುನ್ಸಿಪಲ್ ಕಾಲೋನಿ, ರೇಲ್ವೆಸ್ಟೇಷನ್, ಕಾಮನಬಾವಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ರಾಜೇಂದ್ರನಗರ, ಈದ್ಗಾ ಮೊಹಲ್ಲಾ, ವಿಜಯನಗರ, ಫಿಲ್ಟರ್‍ಹೌಸ್, ರಾಮದಾಸ್ ಕಾಂಪೌಂಡ್, ಪ್ರಸನ್ನ ಟಾಕೀಸ್ ಏರಿಯಾ, ನೆಹರು ನಗರ, ಚೋಳುಗುಡ್ಡ, ಮಂಡಕ್ಕಿಬಟ್ಟಿ, ಕೋಳಿ ಬುರುಜನಹಟ್ಟಿ.  ಗ್ರಾಮಾಂತರ ಪ್ರದೇಶಗಳಲ್ಲಿ ಕಾಸವರಹಟ್ಟಿ, ಗುಡ್ಡದರಂಗವ್ವನಹಳ್ಳಿ, ಬೆಳಗಟ್ಟ, ಪಂಡರಹಳ್ಳಿ, ದೊಡ್ಡಸಿದ್ದವ್ವನಹಳ್ಳಿ, ಕ್ಯಾಸಾಪುರ ಗಳನ್ನು ಹೈರಿಸ್ಕ್ ಏರಿಯಾಗಳೆಂದು ಗುರುತಿಸಲಾಗಿದೆ.  ಈ ಪ್ರದೇಶದಲ್ಲಿ ಸಾರ್ವಜನಿಕರು ಸರಿಯಾದ ಕ್ರಮದಲ್ಲಿ, ನೀರನ್ನು ಸಂಗ್ರಹಿಸಿ ಇಡುತ್ತಿಲ್ಲ.  ಈ ಏರಿಯಾಗಳಲ್ಲಿ ಕೈಗೊಂಡ ಲಾರ್ವ ಸಮೀಕ್ಷೆ ಸಂದರ್ಭದಲ್ಲಿ ಪ್ರತಿ 100 ಮನೆಗಳ ಪೈಕಿ 10 ರಿಂದ 15 ಮನೆಗಳಲ್ಲಿ ಈಡಿಸ್ ಸೊಳ್ಳೆಗಳ ಲಾರ್ವ ಪತ್ತೆಯಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.  ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ, ಅವರು ಎಚ್ಚರ ವಹಿಸುತ್ತಿಲ್ಲ.  ಹೀಗಾಗಿ ಈ ಪ್ರದೇಶಗಳಲ್ಲಿ ಪದೇ ಪದೇ ಡೆಂಗ್ಯೂ, ಚಿಕುಂಗುನ್ಯಾ ರೋಗ ಪ್ರಕರಣ ವರದಿಯಾಗುತ್ತಿವೆ ಎಂದು ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ಜಯಮ್ಮ ಅವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು.  ನಗರಸಭೆಯಿಂದ ವಾರ್ಡ್ ವಾರು ನೀರು ಪೂರೈಕೆ ಮಾಡುವ ದಿನವನ್ನು ಪ್ರಕಟಿಸಿ, ಅದರಂತೆಯೇ ನೀರು ಪೂರೈಸಬೇಕು.  ಹೀಗಾದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೆಚ್ಚಿನ ನೀರು ಸಂಗ್ರಹಿಸುವುದನ್ನು ತಡೆಗಟ್ಟಬಹುದು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ಬಿ. ಜಯಮ್ಮ ಅವರು ಮಾಹಿತಿ ನೀಡಿ, 2025 ರ ವೇಳೆಗೆ ದೇಶವನ್ನು ಮಲೇರಿಯಾ ಮುಕ್ತವನ್ನಾಗಿಸುವ ಗುರಿ ಇದೆ.  ಜಿಲ್ಲೆಯಲ್ಲಿ ಈ ವರ್ಷ 03 ಮಲೇರಿಯಾ ಪ್ರಕರಣ ವರದಿಯಾಗಿದ್ದು, ಬೇರೆ ರಾಜ್ಯದಿಂದ ಜಿಲ್ಲೆಗೆ ವಲಸೆ ಬಂದ ಕಾರ್ಮಿಕರಲ್ಲಿ ಮಲೇರಿಯಾ ಪತ್ತೆಯಾಗಿದೆ.  ಅಲ್ಲದೆ ಕಳೆದ ವರ್ಷ ಹೊರ ಜಿಲ್ಲೆಗಳಿಂದ ಬಂದಂತಹ ಕಾರ್ಮಿಕರು, ವಲಸಿಗರಲ್ಲಿ ಆನೆಕಾಲು ರೋಗ ಪತ್ತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿತ್ತು.  ಜಿಲ್ಲೆಯಲ್ಲಿ ಒಟ್ಟು 839 ಜನರ ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಇದರಲ್ಲಿ 09 ಜನರಲ್ಲಿ ಈ ರೋಗ ಇರುವುದು ದೃಢಪಟ್ಟಿತ್ತು.  ಅಲ್ಲದೆ ಮೆದುಳು ಜ್ವರದ 02 ಪ್ರಕರಣಗಳು ಕೂಡ ವರದಿಯಾಗಿತ್ತು.  ಇದಕ್ಕೆ ಕಾರಣವಾಗುವ ಹಂದಿಗಳನ್ನು ನಗರ, ಪಟ್ಟಣ ಪ್ರದೇಶದಿಂದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ನಗರಸಭೆಗಳಿಗೆ ಪತ್ರ ಬರೆದು ತಿಳಿಸಲಾಗಿದ್ದರೂ, ಇದುವರೆಗೂ ಯಾವುದೇ ನಗರಸಭೆಯಿಂದ ಈ ಕಾರ್ಯ ಆಗಿಲ್ಲ.  ಇನ್ನಾದರೂ ಹಂದಿಗಳ ಸ್ಥಳಾಂತರಕ್ಕೆ ನಗರ, ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ನಗರ, ಪಟ್ಟಣ ವ್ಯಾಪ್ತಿಯಲ್ಲಿನ ಹಂದಿಗಳನ್ನು ಹೊರ ವಲಯಕ್ಕೆ ಸ್ಥಳಾಂತರಿಸಲು ಕ್ರಮ ಜರುಗಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.