ಚಿತ್ರದುರ್ಗ: ವರನಟ ಡಾ.ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಮಂಗಳವಾರ ನೇತ್ರದಾನ ನೊಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‌ನ ಉಪಾಧ್ಯಕ್ಷ ಅರುಣ್‌ಕುಮಾರ್ ಮಾತನಾಡುತ್ತ ದೇಶದಲ್ಲಿ ಅಂಧತ್ವದಿಂದ ನರಳುತ್ತಿರುವವರ ಸಂಖ್ಯೆ ದಿನದಿಂದ ದಿನೆ ಜಾಸ್ತಿಯಾಗುತ್ತಿರುವುದರಿಂದ ಪ್ರತಿಯೊಬ್ಬರೂ ನೇತ್ರದಾನಕ್ಕೆ ಮುಂದಾಗಿ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ವಿನಂತಿಸಿದರು.
ಬೆಂಗಳೂರು ಮೈಸೂರು ಬಿಟ್ಟರೆ ಚಿತ್ರದುರ್ಗ ಜಿಲ್ಲೆ ಅತಿ ಹೆಚ್ಚು ಕಣ್ಣುಗಳನ್ನು ಸಂಗ್ರಹಿಸಿ ಅಂಧರಿಗೆ ಬೆಳಕು ನೀಡಿದೆ. ಯಾರಾದರೂ ಮೃತಪಟ್ಟಾಗ ಕಣ್ಣನ್ನು ಮಣ್ಣಲ್ಲಿ ಮಣ್ಣಾಗಿಸದೆ, ಇಲ್ಲ ದಹಿಸುವ ಮೊದಲು ದಾನ ಮಾಡಿ. ನೇತ್ರದಾನಕ್ಕೆ ಒಪ್ಪಿ ಸಹಿ ಹಾಕುವುದು ಮುಖ್ಯವಲ್ಲ, ಮರಣದ ಸಂದರ್ಭದಲ್ಲಿ ಕುಟುಂಬದವರು ರೋಧಿಸುತ್ತಿರುತ್ತಾರೆ. ಅಂತಹ ಸಮಯದಲ್ಲಿ ಹೋಗಿ ನಾವುಗಳು ನೇತ್ರದಾನ ಮಾಡಿ ಎಂದು ಕೇಳುವುದು ಕಷ್ಠದ ಕೆಲಸ. ಹಾಗಾಗಿ ಮನೆಯವರು ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದೊಡ್ಡ ಮನಸ್ಸು ಮಾಡಿ ನೇತ್ರದಾನ ಮಾಡಬೇಕು ಎಂದು ಕೋರಿದರು.
ಡಾ.ರಾಜ್‌ಕುಮಾರ್‌ರವರು ಮೇರುನಟರಾಗಲು ಅವರಲ್ಲಿದ್ದ ಅಮೋಘ ಕಲೆ, ದೈವಭಕ್ತಿ, ವಿನಯತೆ ಕಾರಣ. ಹಾಗಾಗಿ ಅಂತಹ ಮಹಾನ್‌ಪುರುಷನ ಹುಟ್ಟುಹಬ್ಬದ ದಿನದಂದು ನೇತ್ರದಾನ ಮಾಡುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡಿ ಎಂದು ವಿನಂತಿಸಿದರು.
ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೀವನ್ ಮಾತನಾಡುತ್ತ ಡಾ.ರಾಜ್‌ಕುಮಾರ್ ಅಭಿಮಾನಿಗಳನ್ನೇ ದೇವರು ನಂಬಿದ್ದಕ್ಕಾಗಿ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಿ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿಯಲು ಸಾಧ್ಯವಾಯಿತು. ಅವರ ಸರಳ ಜೀವನ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಮೇರುನಟನ ಹುಟ್ಟುಹಬ್ಬದ ಪ್ರಯುಕ್ತ ನೇತ್ರದಾನಕ್ಕೆ ಒಪ್ಪಿ ಸಹಿ ಹಾಕಿದ ಜೀವನ್‌ರವರು ಡಾ.ರಾಜ್‌ರವರಲ್ಲಿದ್ದ ಸರಳತೆ ವಿನಯತೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ನಗರಸಭೆ ಸದಸ್ಯೆ ಅನುರಾಧ ರವಿಕುಮಾರ್ ಸೇರಿದಂತೆ ಅನೇಕರು ಮರಣದ ನಂತರ ನೇತ್ರದಾನಕ್ಕೆ ಒಪ್ಪಿ ಸಹಿ ಹಾಕಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಮಂಜುನಾಥ್, ಅಂಜಿನಪ್ಪ ವೇದಿಕೆಯಲ್ಲಿದ್ದರು. ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‌ನ ಸಹ ಕಾರ್ಯದರ್ಶಿ ಟಿ.ವೀರಭದ್ರಸ್ವಾಮಿ, ನಿರ್ದೇಶಕ ಎಸ್.ವೀರೇಶ್ ಸೇರಿದಂತೆ ಆರ್ಯ ಈಡಿಗರ ಜನಾಂಗದವರು ಡಾ.ರಾಜ್ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು.