ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರವರ ಮಹಾಪರಿನಿರ್ವಾಣದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ)ಯಿಂದ ಡಾ.ಬಿ.ಆರ್.ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪ್ರಕಾಶ್‌ಬೀರಾವರ ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ಜಾತಿಯವರಿಗೂ ಸಂವಿಧಾನದಲ್ಲಿ ಸವಲತ್ತುಗಳನ್ನು ಒದಗಿಸಿರುವ ಅಂಬೇಡ್ಕರ್ ಕೇವಲ ದಲಿತರಿಗಷ್ಠೆ ಮೀಸಲಲ್ಲ ಎಂಬುದನ್ನು ಬೇರೆಯವರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದರು.

ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಪೇಜಾವರ ಸ್ವಾಮಿಗಳು ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೆ ಬರೆದಿಲ್ಲ ಎಂದು ಹೇಳುವ ಮೂಲಕ ಇಡೀ ದಲಿತ ಸಮುದಾಯವನ್ನೇ ಅವಮಾನ ಮಾಡಿದ್ದಾರೆ. ಬೇಷರತ್ತಾಗಿ ಅವರು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಂ.ಮಲ್ಲಣ್ಣ, ಜಿಲ್ಲಾ ಸಂಚಾಲಕ ಟಿ.ಚಂದ್ರಪ್ಪ, ಕಣಿವೆಮಾರಮ್ಮ ಯುವಕ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ವಿಶ್ವ, ವಸಂತ, ಪ್ರಕಾಶ್ ಕೊಡಗವಳ್ಳಿ, ಎರ್ರಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.