ಚಿತ್ರದುರ್ಗ: ಡಾ.ಬಾಬುಜಗಜೀವನರಾಂರವರು ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರ ದೇಶಕ್ಕಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಅಂತಹ ಮಹಾನ್ ನಾಯಕನ ಮಾರ್ಗದರ್ಶನ ತತ್ವ ಸಿದ್ದಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಎ.ಸೇತೂರಾಂ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಡಾ.ಬಾಬುಜಗಜೀವನರಾಂ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಹಸಿರುಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನರಾಂರವರ ಪರಿಶ್ರಮದಿಂದಾಗಿ ಪರಿಶಿಷ್ಠ ಜಾತಿಯವರಿಗೆ ಇಂದು ಅನೇಕ ಸವಲತ್ತುಗಳು ದೊರಕಿದೆ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ೩೫ ದಿನಗಳ ಸಮಯವಿದೆ. ಎಲ್ಲರೂ ಅಧಿಕಾರಕ್ಕಾಗಿ ಹಪಹಪಿಸುತ್ತಾರೆ. ಇಂತಹ ಶ್ರೇಷ್ಠ ವ್ಯಕ್ತಿಯ ಜಯಂತಿಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಿರುವುದು ನೋವಿನ ಸಂಗತಿ. ಮುಂದಿನ ದಿನಗಳಲ್ಲಿಯಾದರೂ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಸ್ಥಾನಗಳಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡುತ್ತ ದಾರ್ಶನಿಕರು ಮಹಾತ್ಮರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿರುವುದು ಅತ್ಯಂತ ನೋವಿನ ಸಂಗತಿ. ಬಸವ ಜಯಂತಿಯನ್ನು ಲಿಂಗಾಯಿತರು. ಅಂಬೇಡ್ಕರ್ ಜಯಂತಿಯನ್ನು ದಲಿತರು. ಅದೇ ರೀತಿ ವಾಲ್ಮೀಕಿಯನ್ನು ನಾಯಕರಿಗೆ, ಕನಕದಾಸರನ್ನು ಕುರುಬರಿಗೆ ಸೀಮಿತಗೊಳಿಸಲಾಗಿದೆ. ಸಮಾಜ ಸುಧಾರಣೆಗೆ ಜೀವನವನ್ನೇ ಮುಡುಪಾಗಿಟ್ಟಂತ ಮಹಾನ್ ವ್ಯಕ್ತಿಗಳನ್ನು ಎಲ್ಲಾ ಜಾತಿಯವರು ಗೌರವಿಸುವಂತಾಗಬೇಕು ಎಂದರು.
ಇಂದಿರಾಗಾಂಧಿಗೆ ಸಲಹೆಗಾರರಾಗಿದ್ದ ಡಾ.ಬಾಬುಜಗಜೀವನರಾಂ ದಲಿತರು ಎನ್ನುವ ಕಾರಣಕ್ಕಾಗಿ ಪ್ರಧಾನಿಯಾಗುವ ಅವಕಾಶ ಕೈತಪ್ಪಿತು. ಆದರೂ ದೇಶದ ಉಪಪ್ರಧಾನಿಯಾಗಿದ್ದರೂ ಎನ್ನುವುದಾದರೆ ಸುಲಭವಲ್ಲ. ಕಾಂಗ್ರೆಸ್‌ನಿಂದ ಮಾತ್ರ ಎಲ್ಲಾ ಜಾತಿಯವರಿಗೂ ಅಧಿಕಾರ ಸಿಗುತ್ತದೆ. ಜಾತಿವಾದಿಗಳು ನಿರ್ಮಾಣವಾಗುತ್ತಿರುವುದರಿಂದ ದೇಶ ಸಂಕಷ್ಠದಲ್ಲಿದೆ. ಕಾಂಗ್ರೆಸ್ ತತ್ವ ಸಿದ್ದಾಂತಗಳನ್ನು ಮೆಲುಕು ಹಾಕುವ ಮಟ್ಟಕ್ಕೆ ಕಾಂಗ್ರೆಸ್ ಹೋಗಬೇಕಿದೆ ಎಂದು ಹೇಳಿದರು.

ಕೆ.ಪಿ.ಸಿ.ಸಿ.ಕಾರ್ಯದರ್ಶಿ ಸುಬ್ಬಯ್ಯ ಮಾತನಾಡಿ ಡಾ.ಬಾಬುಜಗಜೀವನರಾಂರಂತಹ ವ್ಯಕ್ತಿತ್ವವುಳ್ಳವರನ್ನು ಇಂದು ದೇಶದಲ್ಲಿ ಹುಡುಕಾಡುವಂತ ಪರಿಸ್ಥಿತಿ ಎದುರಾಗಿದೆ. ಸಂವಿಧಾನದ ಸದಸ್ಯರಾಗಿದ್ದ ಅವರು ಸಾಮಾಜಿಕ ನ್ಯಾಯವನ್ನು ಸಂವಿಧಾನದಲ್ಲಿ ಸೇರಿಸಿ ಶೋಷಿತ ಸಮುದಾಯಕ್ಕೆ ಧ್ವನಿ ಕೊಟ್ಟಂತ ಧೀಮಂತ ನಾಯಕ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಡಾ.ಬಾಬುಜಗಜೀವನರಾಂರವರು ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅಲಂಕರಿಸಿದರು. ದೇಶದ ಉಪಪ್ರಧಾನಿಯಾಗಿದ್ದ ಅವರು ಪ್ರಧಾನಿ ಹುದ್ದೆಗೆ ಹೋಗಬೇಕಿತ್ತು. ನಾನಾ ರೀತಿಯ ಕಾರಣಗಳಿಂದಾಗಿ ಅವರು ವಂಚಿತರಾದರು ಎಂದರು.
ಭೀಮಸಮುದ್ರದ ಜಿ.ಎಸ್.ಮಂಜುನಾಥ್, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರುಗಳಾದ ಬಿ.ಜಿ.ಶ್ರೀನಿವಾಸ್, ಡಿ.ಎನ್.ಮೈಲಾರಪ್ಪ, ವಕೀಲರಾದ ಮಲ್ಲೇಶ್, ದುರುಗೇಶ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಕಾಂಗ್ರೆಸ್ ಮುಖಂಡ ತಾಜ್‌ಪೀರ್ ವೇದಿಕೆಯಲ್ಲಿದ್ದರು.
ನ್ಯಾಯವಾದಿ ರವಿ, ಖಲೀಮುಲ್ಲಾ, ಮಹಮದ್‌ಸಾಬ್ ಜಿ.ಆರ್.ಹಳ್ಳಿ, ಗುತ್ತಿಗೆದಾರ ಮೈಲಾರಪ್ಪ ಇನ್ನು ಮುಂತಾದವರು ಡಾ.ಬಾಬುಜಗಜೀವನರಾಂ ಜಯಂತಿಯಲ್ಲಿ ಪಾಲ್ಗೊಂಡಿದ್ದರು.