ಚಿತ್ರದುರ್ಗ: ಹೈದರಾಬಾದ್‌ನಲ್ಲಿ ಪಶುವೈದ್ಯೆ ಡಾ.ಪ್ರಿಯಾಂಕಾರೆಡ್ಡಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಪಾತಕಿಗಳಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಂಘ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮೌನ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹೊಳಲ್ಕೆರೆ ರಸ್ತೆಯಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆ ಆವರಣದಿಂದ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪಶುವೈದ್ಯರು ಮೂಕಪ್ರಾಣಿಗಳ ಸೇವೆ ಸಲ್ಲಿಸುತ್ತಿದ್ದ ಪಶುವೈದ್ಯೆ ಡಾ.ಪ್ರಿಯಾಂಕಾರೆಡ್ಡಿರವರನ್ನು ಕೊಲೆಗೈದಿರುವುದು ಸ್ತೀಕುಲಕ್ಕೆ ಎಸಗಿರುವ ಅಪಮಾನ. ಇದರಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕವಾಗಿ ಸೇವೆ ಸಲ್ಲಿಸುವ ಎಲ್ಲಾ ನೌಕರರಿಗೂ ಸೂಕ್ತ ಭದ್ರತೆ ಒದಗಿಸಿ ಕಾಮುಕರಿಗೆ ತಕ್ಕ ಶಿಕ್ಷೆ ನೀಡಿದಾಗ ಮಾತ್ರ ಡಾ.ಪ್ರಿಯಾಂಕಾರೆಡ್ಡಿ ಆತ್ಮಕ್ಕೆ ಶಾಂತಿ ದೊರಕಲು ಸಾಧ್ಯ ಎಂದು ಪಶುವೈದ್ಯರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಕೃಷ್ಣಪ್ಪ, ಕಾರ್ಯದರ್ಶಿ ಡಾ.ಸಿ.ತಿಪ್ಪೇಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಪಶುವೈದ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.