ಚಿತ್ರದುರ್ಗ: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ರವರಿಗೆ ಸೇರಿದ ಶಿಕ್ಷಣ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ದ್ವೇಷದ ರಾಜಕಾರಣ ಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮಿ ತೀವ್ರವಾಗಿ ಖಂಡಿಸಿದರು.
ಪತ್ರಿಕೆಯೊಂದಿಗೆ ಶನಿವಾರ ಮಾತನಾಡಿದ ಅವರು ಆದಾಯ ತೆರಿಗೆ ಇಲಾಖೆ ಸಂವಿಧಾನದ ಜೊತೆಗಿದೆಯೋ ಅಥವಾ ಕೇಂದ್ರ ಬಿಜೆಪಿ ಸರ್ಕಾರದ ವಶದಲ್ಲಿದೆಯೋ ಎನ್ನುವ ಅನುಮಾನ ಕಾಡುತ್ತಿದೆ. ನಮ್ಮ ಮಠ ಯಾವುದೇ ಒಂದು ಜಾತಿ, ಜನಾಂಗ, ರಾಜಕಾರಣಿಗಳ ಜೊತೆ ಗುರುತಿಸಿಕೊಳ್ಳುವುದಿಲ್ಲ. ಇತ್ತೀಚಿನ ಘಟನೆಗಳನ್ನು ನೋಡಿದರೆ ಕೇಂದ್ರ ಸರ್ಕಾರ ಕೆಲವು ಇಲಾಖೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಡಾ.ಜಿ.ಪರಮೇಶ್ವರ್‌ರವರ ಒಡೆತನಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳು ಇಂದು ನಿನ್ನೆಯದಲ್ಲ. ಅವರ ತಂದೆಯವರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಡಾ.ಜಿ.ಪರಮೇಶ್ವರ್‌ರವರ ಸಹೋದರ ಶಿವಪ್ರಕಾಶ್ ಮುನ್ನಡೆಸುತ್ತಿದ್ದರು. ಈಗ ಡಾ.ಪರಮೇಶ್ವರ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಾತ್ವಿಕ, ಪ್ರಬುದ್ದ ರಾಜಕಾರಣಿ ಡಾ.ಜಿ.ಪರಮೇಶ್ವರ್‌ರವರಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿಲ್ಲ. ಶಿಕ್ಷಣ ಸಂಸ್ಥೆಯಲ್ಲಿ ಯಾವ ವಿದ್ಯಾರ್ಥಿಗಳಿಗೂ ಶೋಷಣೆ ಮಾಡಿಲ್ಲ. ಪರಿಶಿಷ್ಟ ಜಾತಿ/ವರ್ಗದವರು, ಭ್ರಷ್ಟಾಚಾರಿಗಳು ಮಹಾ ಮಲಿನರು ಎನ್ನುವ ಮಾತುಗಳು ಕೇಂದ್ರ ಸರ್ಕಾರದಿಂದ ಕೇಳಿ ಬರುತ್ತಿರುವುದು ಸರಿಯಲ್ಲ. ದಾಳಿಗೆ ಬರೀ ಕಾಂಗ್ರೆಸ್‌ನವರನ್ನೇ ಗುರಿ ಮಾಡುವುದು ಎಷ್ಟು ಸರಿ? ಬೇರೆ ಯಾರು ತೆರಿಗೆ ಇಲಾಖೆ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು.
ಕೇಂದ್ರದ ಫರ್ಮಾನಿನಂತೆ ನಡೆದುಕೊಳ್ಳುತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಹಾಗೂ ನಿಸ್ಪಕ್ಷಪಾತವಾಗಿ ನಡೆದುಕೊಳ್ಳಲಿ. ಸ್ವಚ್ಚ, ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಡಾ.ಜಿ.ಪರಮೇಶ್ವರ್ ಈ ಪರೀಕ್ಷೆಯಲ್ಲಿ ಗೆದ್ದು ಬರುತ್ತಾರೆಂಬ ವಿಶ್ವಾಸ ನಮಗಿದೆ. ಇಂತಹ ಘಟನೆಗಳು ಮುಂದೆ ಮರುಕಳಿಸಿದರೆ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಸ್ವಾಮೀಜಿ ತಮ್ಮ ಇಂಗಿತ ವ್ಯಕ್ತಪಡಿಸಿದರು.
ಕೆ.ಪಿ.ಸಿ.ಸಿ.ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕ ರವಿಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.