ಚಿತ್ರದುರ್ಗ: ರಾಜ್ಯ ಸಮ್ಮಿಶ್ರ ಸರ್ಕಾರದ ವತಿಯಿಂದ ಶನಿವಾರ ನಗರದಲ್ಲಿ ಆಚರಿಸುತ್ತಿರುವ ಟಿಪ್ಪುಸುಲ್ತಾನ್ ಜಯಂತಿ ವಿರೋಧಿಸಿ ಮದಕರಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ.ಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಮಧ್ಯಾಹ್ನದ ನಂತರ ಬಿಡುಗಡೆಗೊಳಿಸಿದರು.

ಎರಡು ದಿನಗಳ ಕಾಲ ನಗರದಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ಬಿಜೆಪಿ.ಯ ಒಬೊಬ್ಬರೆ ಬಂದು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿರುವ ಪಾರ್ಕಿನಲ್ಲಿ ಜಮಾಯಿಸತೊಡಗಿದರು. ಸುಮಾರು ಹನ್ನೊಂದು ಗಂಟೆಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ಪ್ರತಿಭಟನೆಗೆ ಆಗಮಿಸಿ ಕೆಲವು ನಿಮಿಷಗಳ ಕಾಲ ಭಾಷಣಕ್ಕೆ ಸಮಯಾವಕಾಶ ಕೊಡಿ ಎಂದು ಕೋರಿದಾಗ ಜಿಲ್ಲಾ ರಕ್ಷಣಾಧಿಕಾರಿ ಸುತರಾಂ ಒಪ್ಪಿಗೆ ನೀಡಲಿಲ್ಲ. ಇದರಿಂದ ಕುಪಿತಗೊಂಡ ಕಾರ್ಯಕರ್ತರು ಕನ್ನಡ ದ್ರೋಹಿ, ಮತಾಂಧ ಟಿಪ್ಪುಗೆ ಧಿಕ್ಕಾರ, ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆಯನ್ನು ಕೂಗಿದ್ದೇ ತಡ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೇರಿದಂತೆ ೫೪ ಮಂದಿಯನ್ನು ಬಂಧಿಸಿದ ಪೊಲೀಸರು ವಾಹನಗಳಲ್ಲಿ ತುಂಬಿಕೊಂಡು ನೇರವಾಗಿ ಐಮಂಗಲ ಸಮೀಪವಿರುವ ಪೊಲೀಸ್ ತರಬೇತಿ ಶಾಲೆಗೆ ಕರೆದೊಯ್ದರು.

ಬಿಜೆಪಿ.ಯವರ ಪ್ರತಿಭಟನೆಗೆ ಅವಕಾಶ ನೀಡಬಾರದೆನ್ನುವ ಕಾರಣಕ್ಕಾಗಿಯೇ ಮದಕರಿನಾಯಕ ಪ್ರತಿಮೆ ಸುತ್ತಲೂ ನಾಲ್ಕು ಕಡೆ ಕೇಂದ್ರ ಮೀಸಲು ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಸ್ಥಳೀಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಇನ್ನೇನು ಪ್ರತಿಭಟನೆಗೆ ಸಜ್ಜಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಎರಡು ದಿನಗಳ ಕಾಲ ನಗರದಲ್ಲಿ ೧೪೪ ನೇ ಸೆಕ್ಷನ್ ಜಾರಿಯಲ್ಲಿರುವುದರಿಂದ ನಾಲ್ಕು ಜನಕ್ಕಿಂತ ಹೆಚ್ಚು ಗುಂಪು ಕಟ್ಟುವಂತಿಲ್ಲ. ಯಾವುದೇ ಭಾಷಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಮನವರಿಕೆ ಮಾಡಿದರು.

.ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ನಗರ ಮಂಡಲ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಶ್ಯಾಮಲ ಶಿವಪ್ರಕಾಶ್, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್‌ಸಿದ್ದಾಪುರ, ಶಿವಣ್ಣಾಚಾರ್, ಸೇರಿದಂತೆ ಒಟ್ಟು ೫೪ ಮಂದಿಯನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಮಾಡಲಾಯಿತು.