ಚಿತ್ರದುರ್ಗ: ಬ್ರಿಟೀಷರನ್ನು ದೇಶದಿಂದ ತೊಲಗಿಸಲು ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಕೇವಲ ಮುಸ್ಲಿಂ ಸಮುದಾಯಕಾಗಿ ಹೋರಾಡಿಲ್ಲ, ಹೀಗಾಗಿ ಟಿಪ್ಪುವನ್ನು ಒಬ್ಬ ದೇಶಭಕ್ತನಂತೆ ಗೌರವದಿಂದ ಕಾಣುವ ಅಗತ್ಯವಿದೆ ಎಂದು ರಾಜ್ಯ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಶನಿವಾರದಂದು ಏರ್ಪಡಿಸಿದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಮುಖ ರಾಜರುಗಳಲ್ಲಿ, ಟಿಪ್ಪು ಸುಲ್ತಾನ್ ಪ್ರಮುಖ. ಟಿಪ್ಪು ಸುಲ್ತಾನ್ ತನ್ನ ಪ್ರಾಣವನ್ನೇ ಪಣವಾಗಿಟ್ಟು, ಬ್ರಿಟೀಷರನ್ನು ಈ ನೆಲದಿಂದ ತೊಲಗಿಸಲು ಹೋರಾಡಿದ ಅಪ್ರತಿಮ ದೇಶಭಕ್ತ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸತ್ಯ ಸಂಗತಿಯಾಗಿದೆ. ಇತಿಹಾಸವನ್ನು ತಿಳಿದಿದ್ದರೂ ಕೂಡ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವಿರೋಧಿಸುವುದು ಸರಿಯಲ್ಲ. ಟಿಪ್ಪು ಜಯಂತಿ ವಿರೋಧಿಸುವವರು ಇತಿಹಾಸವನ್ನು ಸರಿಯಾಗಿ ಅರಿಯದವರು. ಟಿಪ್ಪು ಕೇವಲ ಮುಸ್ಲಿಂ ಸಮುದಾಯಕ್ಕಾಗಿ ಮಾತ್ರ ಹೋರಾಡಿಲ್ಲ. ದೇಶಕ್ಕಾಗಿ, ನಾಡಿನಲ್ಲಿದ್ದ ಎಲ್ಲ ಧರ್ಮೀಯರ ಪ್ರತಿನಿಧಿಯಾಗಿ ಬ್ರಿಟೀಷರ ವಿರುದ್ಧ ಹೋರಾಡಿದ. ಬೇರೆ ಬೇರೆ ಧರ್ಮೀಯರ ಜಯಂತಿ, ಸಮಾರಂಭಗಳಿಗೆ ವಿರೋಧಿಸದ ಕೆಲವರು, ಕೇವಲ ಟಿಪ್ಪು ಜಯಂತಿಗೆ ಮಾತ್ರ ವಿರೋಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಕೆಲ ವಿರೋಧಿ ಶಕ್ತಿಗಳು ದೇಶದಲ್ಲಿ ಕೋಮುವಾದದ ವಿಷಬೀಜ ಬಿತ್ತಿ, ಜನರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಈ ದೇಶದ ಜವಾಬ್ದಾರಿಯುತ ನಾಗರಿಕರಾಗಿರುವ ನಾವು, ಸೌಹಾರ್ದಯುತವಾಗಿ ಅಣ್ಣ ತಮ್ಮಂದಿರಂತೆ ಬಾಳೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ನುಡಿದರು.

ಸಂಸದ ಬಿ.ಎನ್. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು.
ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ದೇಶ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಉಪವಿಭಾಗಾಧಿಕಾರಿ ವಿಜಯಕುಮಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಅನ್ವರ್‌ಭಾಷಾ, ನಗರಸಭೆ ಸದಸ್ಯ ಮಹಮದ್ ಅಹಮದ್ ಪಾಷಾ, ಗಣ್ಯರಾದ ಶಿವಮೂರ್ತಿ ನಾಯಕ್ ಮುಂತಾದವರು ಭಾಗವಹಿಸಿದ್ದರು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಸ್ವಾಗತಿಸಿದರು. ಎಸ್.ಎಲ್. ರಾಘವೇಂದ್ರ ಮತ್ತು ಸಂಗಡಿಗರು ಇದೇ ಸಂದರ್ಭದಲ್ಲಿ ಗೀತಗಾಯನ ಪ್ರಸ್ತುತಪಡಿಸಿದರು.