ಚಿತ್ರದುರ್ಗ: 2020-21ನೇ ಸಾಲಿನ ಜಿಲ್ಲೆಯ ಅನುದಾನ ಯಾವುದೇ ಕಾರಣಕ್ಕೆ ಲ್ಯಾಪ್ಸ್ ಆಗಬಾರದು. ಯಾವುದೇ ಕಾರಣಕ್ಕೂ ನನ್ನ ಅವಧಿಯಲ್ಲಿ ಅನುದಾನ ಲ್ಯಾಪ್ಸ್ ಆಗಲು ಬಿಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೂಚನೆ ನೀಡಿರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರದ ಜಿಲ್ಲೆಯ ಅನುದಾನ ಲ್ಯಾಪ್ಸ್ ಆದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಪ್ರಸಕ್ತ ವರ್ಷದ ಫೆಬ್ರುವರಿ ಒಳಗೆ ಕಾಮಗಾರಿಗಳನ್ನು  ಮುಕ್ತಾಯಗೊಳಿಸಬೇಕು. ಯಾವುದೇ ಕಾರಣಕ್ಕೆ ವಷಾಂತ್ಯದವರೆಗೆ ಸಮಯ ವ್ಯಯಮಾಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೊಬೈಲ್ ಸ್ವೀಚ್ ಆಫ್ ಮಾಡಬೇಡಿ: ಜನರ ಸಮಸ್ಯೆಗಳಿಗೆ  ಪರಿಹಾರ ಒದಗಿಸಲು ಹಾಗೂ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲು ಜನಪ್ರತಿನಿಧಿಗಳು ಫೋನ್ ಮಾಡಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು. ಸರ್ಕಾರ ನೀಡಿರುವ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಮೊಬೈಲ್ ಸ್ವೀಚ್ ಆಫ್ ಮಾಡಿಕೊಳ್ಳಬಾರದು ಎಂದು ಸೂಚನೆ ನೀಡಿದರು.

26.65 ಕೋಟಿ ಅನುದಾನ ವಾಪಾಸ್ಸ್‍ಗೆ ಮನವಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ದೊಡ್ಡ ಮೊತ್ತದ ಅನುದಾನ ಲ್ಯಾಪ್ಸ್ ಆಗಿದ್ದು, ಈ ಅನುದಾನ ವಾಪಾಸ್ಸು ಮರಳಿಸುವಂತೆ ಇಲಾಖೆ ಸಚಿವರಿಗೆ ಈಚೆಗೆ ಮನವಿ ಮಾಡಲಾಗಿದೆ. ಅನುದಾನ ವಾಪಾಸ್ಸು ಮರಳುವ ವಿಶ್ವಾಸ ಇದೆ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ತಿಳಿಸಿದರು.