ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಎಚ್ಚರ ವಹಿಸುವ ಸಲುವಾಗಿ ಮುಂಜಾಗ್ರತಾ ಕ್ರಮದಿಂದ ಸಾಮಾನ್ಯ ಜ್ವರ ತೊಂದರೆ ತಪಾಸಣೆಗಾಗಿ ಜಿಲ್ಲೆಯಲ್ಲಿ 12 ಫೀವರ್ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗಿದ್ದು, ಈವರೆಗೆ ಒಟ್ಟು 475 ಜನರು ಫೀವರ್ ಕ್ಲಿನಿಕ್‍ಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಜ್ವರ ಇದ್ದಲ್ಲಿ ಕೂಡಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಾದ್ಯಂತ ಒಟ್ಟು 12 ಫೀವರ್ ಕ್ಲಿನಿಕ್‍ಗಳನ್ನು ಪ್ರಾರಂಭಿಸಿದೆ.  ಹಿರಿಯೂರು ತಾಲ್ಲೂಕು ಐಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈವರೆಗೆ 119 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.  ಹಿರಿಯೂರಿನ ಟಿ.ಗೌಂಡರ್ ಸಮುದಾಯ ಭವನದಲ್ಲಿ 21, ಚಳ್ಳಕೆರೆಯ ಛೇಂಬರ್ ಆಫ್ ಕಾಮರ್ಸ್ ಸಮುದಾಯ ಭವನದಲ್ಲಿನ ಫೀವರ್ ಕ್ಲಿನಿಕ್‍ನಲ್ಲಿ 82.  ಹೊಳಲ್ಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ 79 ಜನರ ಆರೋಗ್ಯ ತಪಾಸಣೆಯಲ್ಲಿ ಇಬ್ಬರಿಗೆ ಜ್ವರ ಕಂಡುಬಂದಿದೆ.  ಮೊಳಕಾಲ್ಮೂರು ತಾಲ್ಲೂಕು ರಾಂಪುರದ ಪತಿ ಬಸಪ್ಪ ಚೌಲ್ಟ್ರಿಯಲ್ಲಿನ ಫೀವರ್ ಕ್ಲಿನಿಕ್‍ನಲ್ಲಿ 15,  ಮೊಳಕಾಲ್ಮೂರಿನ ಗುರುಭವನದಲ್ಲಿ 23 ಚಿತ್ರದುರ್ಗದ ಎಸ್‍ಜೆಎಂ ಕಲಾ ಕಾಲೇಜಿನ ಫೀವರ್ ಕ್ಲಿನಿಕ್‍ನಲ್ಲಿ 23, ಭೀಮಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 65 ಹಾಗೂ ನಗರದ ಬಸವೇಶ್ವರ ಹಾಸ್ಪಿಟಲ್‍ನಲ್ಲಿ 48 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ಫೀವರ್ ಕ್ಲಿನಿಕ್‍ನ ನೋಡಲ್ ಅಧಿಕಾರಿಯಾಗಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 30 ರಿಂದ ಏ. 01 ರವರೆಗೆ ಕೈಗೊಂಡ ಜ್ವರ ಪರೀಕ್ಷೆಗೆ ಸಂಬಂಧಿಸಿದಂತೆ 892 ಮಹಿಳೆ, 801 ಪುರುಷರು ಸೇರಿದಂತೆ ಒಟ್ಟು 1693 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 04 ಸಂಶಯಾಸ್ಪದ ಪ್ರಕರಣಗಳನ್ನು ಹೆಚ್ಚಿನ ಆರೋಗ್ಯ ತಪಾಸಣೆಗೆ ಶಿಫಾರಸ್ಸು ಮಾಡಲಾಗಿದೆ.  ಚಿತ್ರದುರ್ಗ ತಾಲ್ಲೂಕಿನಲ್ಲಿ 337, ಚಳ್ಳಕೆರೆ-251, ಹಿರಿಯೂರು-371, ಹೊಳಲ್ಕೆರೆ-288, ಹೊಸದುರ್ಗ-298, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 148 ಜನರಿಗೆ ಜ್ವರ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.