ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ (ಕೋವಿಡ್-19) ಸಂಬಂಧಿಸಿದಂತೆ, ಭೀಮಸಮುದ್ರದಲ್ಲಿ ವರದಿಯಾಗಿದ್ದ ಒಂದು ಪ್ರಕರಣ ಹೊರತುಪಡಿಸಿ, ಇದುವರೆಗೂ ಬೇರೆ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ  ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಗೆ ಸಂಬಂಧಿಸಿದಂತೆ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,  ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೂ 259 ವ್ಯಕ್ತಿಗಳನ್ನು ಆರೋಗ್ಯ ಇಲಾಖೆಯಿಂದ ನೊಂದಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಚಿತ್ರದುರ್ಗ-133, ಹಿರಿಯೂರು-41, ಚಳ್ಳಕೆರೆ-34, ಹೊಸದುರ್ಗ-27, ಮೊಳಕಾಲ್ಮುರು-09 ಹಾಗೂ ಹೊಳಲ್ಕೆರೆ-16 ಮಂದಿ ಸೇರಿದಂತೆ ಒಟ್ಟು 259 ವ್ಯಕ್ತಿಗಳನ್ನು ನೊಂದಣಿ ಮಾಡಿಕೊಂಡು, ಇದರಲ್ಲಿ 213 ವ್ಯಕ್ತಿಗಳು 14 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ, ಬಿಡುಗಡೆ ಹೊಂದಿದ್ದಾರೆ. 14 ದಿನಗಳ ಕಾಲ ಮನೆಯಲಿಯೇ ಪ್ರತ್ಯೇಕವಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ.  ಪ್ರತಿದಿನವೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಅಂತಹವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಲಾಗಿದೆ. ಹೋಂ ಕ್ವಾರಂಟೈನ್ ಅವಧಿ ಮುಗಿಸಿದ 213 ವ್ಯಕ್ತಿಗಳಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂಬುದಾಗಿ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿರುವ 438 ಖಾಸಗಿ ಆಸ್ಪತ್ರೆಗಳು ಕೂಡ ಓಪನ್ ಆಗಿದ್ದು, ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುತ್ತಿದೆ.  ಖಾಸಗಿ ಆಸ್ಪತ್ರೆಯ ಕೆಲವು ವೈದ್ಯರು ಟೆಲಿಮೆಡಿಸನ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಉಪಸ್ಥಿತರಿದ್ದರು.