ಚಿತ್ರದುರ್ಗ: ಗುಜರಾತಿನ ಅಹಮದಾಬಾದ್‍ನಿಂದ ಜಿಲ್ಲೆಗೆ ಮಂಗಳವಾರ ಖಾಸಗಿ ಬಸ್‍ನಲ್ಲಿ ಬಂದಂತಹ 15 ತಬ್ಲಿಘಿಗಳ ಆರೋಗ್ಯ ಪರೀಕ್ಷಿಸಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.  ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕೋವಿಡ್-19 ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗುಜರಾತ್ ರಾಜ್ಯದ ಅಹಮದ್‍ಬಾದ್‍ನ ಜಿನಾತ್‍ಪುರ ತರ್ಕೇಜ್ ಮಸೀದಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿನ 15 ಜನ ಹೋಗಿದ್ದರು.   ಆದರೆ ಲಾಕ್‍ಡೌನ್ ಜಾರಿಯಾದ ಕಾರಣದಿಂದಾಗಿ ಜಿಲ್ಲೆಗೆ ಹಿಂದಿರುಗಿರಲು ಸಾಧ್ಯವಾಗಿರಲಿಲ್ಲ.  ಲಾಕ್‍ಡೌನ್ ಸಡಿಲಿಕೆ ಕಾರಣದಿಂದಾಗಿ ಅಲ್ಲಿನ ಜಿಲ್ಲಾಡಳಿತದಿಂದ ಅನುಮತಿ ಪಡೆದು, ಚಿತ್ರದುರ್ಗಕ್ಕೆ ಮರಳಿ ಬಂದಿದ್ದಾರೆ. ಆದರೆ ಇವರು ಅಂತರರಾಜ್ಯ ಪ್ರಯಾಣಕ್ಕೆ ಇರುವ ನಿಯಮಗಳನುಸಾರ ಅನುಮತಿ ಪಡೆದಿಲ್ಲ.  ಜಿಲ್ಲೆಗೆ ಮರಳಿರುವ 15 ತಬ್ಲೀಘಿಗಳನ್ನು ಸ್ಟ್ಯಾಂಡರ್ಸ್ ಆಪರೇಷನ್ ಪ್ರೊಟೊಕಾಲ್ (ಎಸ್‍ಒಪಿ) ಪ್ರಕಾರ ಚಿತ್ರದುರ್ಗದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದರು.

ಗುಜರಾತಿನ ಅಹಮದಾಬಾದ್‍ನಿಂದ ಸೂರತ್, ನಾಸಿಕ್, ವಿಜಯಪುರ, ಹೊಸಪೇಟೆ ಮಾರ್ಗವಾಗಿ ಇವರು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿದ್ದು, ಜಿಲ್ಲೆಗೆ ಮರಳಿ ಬರಲು ಅಹಮದಾಬಾದ್‍ನಿಂದ ಪಾಸ್ ನೀಡಲಾಗಿತ್ತು. ಪಾಸ್ ನೀಡುವ ಮೊದಲು ಅಲ್ಲಿಯೇ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗಿದೆ.  ಮಂಗಳವಾರ ಜಿಲ್ಲೆಯ ಚೆಕ್‍ಪೋಸ್ಟ್‍ಗೆ ಖಾಸಗಿ ಬಸ್‍ನಲ್ಲಿ ಆಗಮಿಸಿದ ಇವರನ್ನು ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಿ, ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲ ತಬ್ಲೀಘಿಗಳ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಿ ಈಗಾಗಲೇ ಪರೀಕ್ಷೆಗೆ ಕಳುಹಿಸಲಾಗಿದೆ. ಗುಜರಾತಿನಲ್ಲಿದ್ದಾಗ 15 ಜನರ ಪೈಕಿ 04 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು.  ಹೀಗಾಗಿ ಅಲ್ಲಿಯೇ ಚಿಕಿತ್ಸೆ ಪಡೆದು, ಗುಣಮುಖರಾಗಿ ಇಲ್ಲಿಗೆ ಬಂದಿದ್ದಾರೆ. ಈಗ ಇವರಲ್ಲಿ ಯಾವುದೇ ಕೋವಿಡ್-19 ಸೋಂಕು ಇಲ್ಲ, ಈ ಕುರಿತು ಅವರು ಪ್ರಮಾಣ ಪತ್ರ ಹೊಂದಿದ್ದಾರೆ.  ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ಎಲ್ಲ 15 ಜನರಿಗೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಿ, ಮತ್ತೊಮ್ಮೆ ಈ ಎಲ್ಲರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ರಾಜಸ್ಥಾನದ ಮೂಲದ 21 ಜನ ಪ್ರವಾಸಿಗರು ಬುಧವಾರದಂದು ಚಿತ್ರದುರ್ಗ ಮಾರ್ಗದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು. ಚಿಕ್ಕಗೊಂಡನಹಳ್ಳಿ ಬೋಗಳೇರಹಟ್ಟಿ ಚೆಕ್‍ಪೋಸ್ಟ್‍ನಲ್ಲಿ ಇವರನ್ನು ತಡೆದು ಪರಿಶೀಲನೆ ಮಾಡಿದಾಗ ಅವರು ಯಾವುದೇ ಪಾಸ್ ಹೊಂದಿರಲಿಲ್ಲ. ಹೀಗಾಗಿ ಇವರಿಗೆ ಸೇವಾ ಸಿಂಧು ಫೋರ್ಟ್‍ಲ್‍ನಲ್ಲಿ ಪಾಸ್ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಈ ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದರು.  ತುರ್ತು ಕಾರ್ಯಗಳಿಗೆ ಅಂತರ್‍ಜಿಲ್ಲೆಗೆ ತೆರಳಬೇಕಿದ್ದಲ್ಲಿ ಇ-ಪಾಸ್‍ಗೆ ಅರ್ಜಿಯನ್ನು ತಹಸಿಲ್ದಾರರ ಕಚೇರಿ ಅಥವಾ ಗ್ರಾಮ ಪಂಚಾಯತ್ ಕಚೇರಿಗಳಿಗೂ ಸಲ್ಲಿಸಬಹುದು.  ಬಳಿಕ ಆನ್‍ಲೈನ್‍ನಲ್ಲಿಯೇ ಅನುಮತಿ ಪತ್ರ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಜಿಲ್ಲೆಯಲ್ಲಿ ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಮಾತ್ರ ಕಪ್ರ್ಯೂ ಇರುತ್ತದೆ. ಇದು ಅತ್ಯವಶ್ಯಕ ವಸ್ತುಗಳಿಗೆ ಅನ್ವಯಿಸುವುದಿಲ್ಲ. ಅನಾವಶ್ಯಕವಾಗಿ ಜನರು ಓಡಾಡುವಂತಿಲ್ಲ. ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.