ಸಾಣೇಹಳ್ಳಿ: ಜಾನಪದ ಸಂಸ್ಕೃತಿ ಶ್ರೀಮಂತ ಸಂಸ್ಕೃತಿ. ಇಂದು ಇಲ್ಲಿ ಜಾನಪದ ಸಂಸ್ಕೃತಿಯ ಮೇಳವೇ ನಡೆದಂತೆ ಭಾಸವಾಯಿತು. ಜನಪದರ ವೇದಿಕೆಗಳು ಬಹಿರಂಗದವು. ಅವರು ಯಾವುದನ್ನು ಮುಚ್ಚುಮರೆಯಿಲ್ಲದೆ ತಮ್ಮ ಇಡೀ ಅಂತರಂಗವನ್ನು ಬಿಚ್ಚಿ ಹೇಳುವವರು. ಇಂಥ ಹೃದಯ ಶ್ರೀಮಂತಿಕೆಯುಳ್ಳ ಜಾನಪದ ಸಂಸ್ಕೃತಿ ಇಂದು ಕಾಣೆಯಾಗುತ್ತಿರುವುದು ವಿಷಾಧ ಎಂದು ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ರಂಗಮಂದಿರದಲ್ಲಿ ದಂದಣ-ದತ್ತಣ ಗೋಷ್ಠಿಯಡಿ ಆಯೋಜನೆಗೊಂಡಿದ್ದ ‘ಜಾನಪದ ಕಲೆಗಳು’ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.  ಜನ ಇಂದು ನಾಗರೀಕತೆಯ ಮುಖವಾಡ ಹಾಕಿ ಹಣದ ಬೆನ್ನು ಹತ್ತಿರುವುದು. ವೈವಿಧ್ಯಮಯವಾದ ಬೆಳೆಗಳನ್ನು ರೈತರು ಬೆಳೆಯುತ್ತಿಲ್ಲ ಹಾಗಾಗಿ ಸುಗ್ಗಿಹಬ್ಬಗಳಿಲ್ಲ. ಜೊತೆಗೆ ಇಂದಿನ ಕಿರಿಯರಲ್ಲಿ ಹಿರಿಯರ ಸಂಪ್ರದಾಯಗಳ ಬಗ್ಗೆ ಅನಾದರ ತಳೆದಿರುವುದು ದುರದೃಷ್ಟಕರ ಸಂಗತಿ. ನಾಗರಿಕ ಲೋಕ ಜಾನಪದ ಲೋಕವನ್ನು ಹಾಳುಗೆಡುವಿದೆ ಎಂದರು.

ಸಾಣೇಹಳ್ಳಿಯ ಮಕ್ಕಳಿಗೆ ಜಾನಪದ ಕಲೆಗಳ ತರಬೇತಿ ನೀಡುವ ಕೆಲಸವನ್ನು ಮಾಡಲಾಗುವುದು. ಜಾನಪದ ಕಲೆಗಳು ಕರ್ಣಾನಂದವನ್ನು ನೀಡುವಂಥಹವು. ಜನಪದ ಸಂಸ್ಕೃತಿಯಿಂದ ನಾಡಿನಲ್ಲಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ಮೇಲು-ಕೀಳು ಮುಂತಾದ ಅನಿಷ್ಟಗಳನ್ನು ನಿವಾರಿಸಲು ಸಾಧ್ಯ. ವಿಭಿನ್ನ ಜಾತಿ, ಮತ, ಧರ್ಮ, ಭಾಷೆ, ಹಿರಿ-ಕಿರಿಯ ಮುಂತಾದವುಗಳ ಹಂಗನ್ನು ಮೀರಿದಂತೆ ಭಾವಕ್ಯತೆಯನ್ನು ಜನಪದ ಕಲೆಗಳು ಬೆಳೆಸುವವು. ಸುಸಂಸ್ಕೃತ ಜೀವನಕ್ಕೆ ನಾಂದಿಯಾಡುವಂಥದ್ದು ಜಾನಪದ ಕಲೆಗಳು. ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳು ಮತ್ತು ಅಧ್ಯಾಪಕರು ಬದ್ಧತೆ ತೋರಬೇಕು ಎಂದರು.