ಚಿತ್ರದುರ್ಗ: 6 ಕೋಟಿ 40 ಲಕ್ಷ ಜನಸಂಖ್ಯೆ ಹೊಂದಿರುವ ಕರ್ನಾಟಕ, 132 ಕೋಟಿ ಜನಸಂಖ್ಯೆ ದಾಟಿರುವ ಭಾರತ, 755 ಕೋಟಿ ಜನಸಂಖ್ಯೆ ದಾಟುತ್ತಿರುವ ವಿಶ್ವ, ವಿಶ್ವದ ಪರಿಸರದ ಮೇಲೆ ಅಗಾಧವಾದ ಒತ್ತಡವನ್ನು ಬೀರುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಮಾಲಿನ್ಯವೂ ಕೂಡ ಹೆಚ್ಚಾಗುತ್ತಿದೆ ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು .

ಅವರು ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಸಂತ ಜೋಸೆಫರ ಬಾಲಕಿಯರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಸುಂದರ ಭವಿಷ್ಯ ನಿರ್ಮಿಸಲು ಜನಸಂಖ್ಯಾ ಸ್ಫೋಟವನ್ನು ನಿಗ್ರಹಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರದ ಮೇಲೆ, ನೀರಿನ ಮೇಲೆ, ಪರಿಸರದ ಮೇಲೆ ಅಗಾಧ ಒತ್ತಡ ಬೀಳುತ್ತಿದ್ದು, ಬಡತನಕ್ಕೆ, ಅನಾರೋಗ್ಯಕ್ಕೆ, ಕಾರಣವಾಗುತ್ತಿದೆ. ಆರ್ಥಿಕ ಅಸಮಾನತೆ, ಶೋಷಣೆ, ವಂಚನೆ, ಅಪರಾಧಗಳ ಸಂಖ್ಯೆ, ಜನಸಂಖ್ಯೆ ಹೆಚ್ಚಳದ ಜೊತೆಗೆ ಹೆಚ್ಚಾಗುತ್ತಾ ಬರುತ್ತಿವೆ, ಮಾನವನ ದುರಾಸೆಯ ಫಲದಿಂದ, ಪರಿಸರದ ಮೇಲೆ ದುಷ್ಪರಿಣಾಮಗಳು ಹೆಚ್ಚಾಗುತ್ತಿವೆ, ನೆಲ, ಜಲ, ಮಣ್ಣಿನ ಮಾಲಿನ್ಯ ವಾಯುಮಾಲಿನ್ಯ, ಶಬ್ದಮಾಲಿನ್ಯ, ಸ್ವಚ್ಛತೆಯಲ್ಲಿ ಅಗಾಧವಾದ ಕೊರತೆ, ಜನಸಂಖ್ಯಾ ಸ್ಫೋಟದ ಪ್ರತಿಫಲಗಳಾಗಿವೆ. ಗಂಡು ಮತ್ತು ಹೆಣ್ಣಿನ ಬಗ್ಗೆ ಅಸಮಾನತೆ, ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತಿದೆ ಎಂದರು.
ಮನೆಯಲ್ಲಿ ಹೆಣ್ಣಿರಲಿ, ಗಂಡಿರಲಿ, ಸಮಾನವಾದ ಸ್ಥಾನವನ್ನು ನೀಡಿದರೆ, ಮಕ್ಕಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಹಾಯಕವಾಗುತ್ತದೆ. ಶಿಕ್ಷಣದಿಂದ ವಂಚಿತರಾದ ಜನರನ್ನು, ಶಿಕ್ಷಿತರನ್ನಾಗಿ ಮಾಡುವುದು ಸಹ ಅಗತ್ಯವಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಮಟ್ಟದಲ್ಲಿ ಶಿಕ್ಷಣದಲ್ಲಿ ಆದ್ಯತೆ ನೀಡಿ, ಅವರಲ್ಲಿ ಮಾನಸಿಕ ಬದಲಾವಣೆಗಳನ್ನು ತಂದಾಗ, ಕುಟುಂಬದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಾದ್ಯವಾಗುತ್ತದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರೀಟಾ, ಉಮಾ, ಪೌಲಿ, ಸುಶೀಲಾ, ಮೇರಿ, ಗೌರಿ, ರೀಟಾ, ತೇಜು, ಉಮಾ, ವಿಕ್ಟೋರಿಯಾ, ರೋಸಿ, ಸುಚಿತಾ, ಶಿವಲಿಂಗಮ್ಮ, ದೈಹಿಕ ಶಿಕ್ಷಕರಾದ ದೀಕ್ಷಿತ್, ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ಜಲಜಾ ರಮೇಶ್, ಕಾರ್ಯದರ್ಶಿ ಸುಧಾ ನಾಗರಾಜ್, ಮುಂತಾದವರು ಭಾಗವಹಿಸಿದ್ದರು