ಚಿತ್ರದುರ್ಗ: ಜನಸಂಖ್ಯೆ ನಿಯಂತ್ರಣ ಕುರಿತು ಸಾಮೂಹಿಕ ವಿವಾಹಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ವಿಶ್ವಜನಸಂಖ್ಯಾ ದಿನಾಚರಣೆ ಮತ್ತು ವ್ಯಾಸೆಕ್ಟಮಿ ಸಾಧಕರು ಮತ್ತು ಕಾಯಕಲ್ಪ ಪ್ರಶಸ್ತಿ ವಿಜೇತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿಶ್ವದಲ್ಲಿ ೭೫೦ ಕೊಟಿ ಜನಸಂಖ್ಯೆಯಿದೆ. ಭಾರತದ ಜನಸಂಖ್ಯೆ ೧೩೦ ಕೋಟಿ ದಾಟುತ್ತಿದೆ. ಜನಸಂಖ್ಯೆ ಸ್ಪೋಟವಾದಂತೆಲ್ಲಾ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಜನಸಂಖ್ಯೆ ನಿಯಂತ್ರಿಸುವುದು ಕೇವಲ ಆರೋಗ್ಯ ಇಲಾಖೆ ಹಾಗೂ ಅಧಿಕಾರಿಗಳ, ಜನಪ್ರತಿನಿಧಿಗಳ ಕೆಲಸವಲ್ಲ. ಪ್ರತಿಯೊಬ್ಬ ಪ್ರಜೆಗೂ ಜನಸಂಖ್ಯೆ ಹೆಚ್ಚುತ್ತಿರುವ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಭಾರತದ ಜನಸಂಖ್ಯೆಗಿಂತಲೂ ಚೀನಾ ಜನಸಂಖ್ಯೆಯಲ್ಲಿ ಮುಂದಿದೆ. ಆದರೆ ಅಲ್ಲಿ ಜನಶಕ್ತಿಯನ್ನೇ ಸಂಪತ್ತನ್ನಾಗಿ ಮಾಡಿಕೊಂಡಿರುವುದರಿಂದ ಚೀನ ದೇಶ ಮುಂದುವರೆದಿದೆ. ಬಹಳಷ್ಟು ದಂಪತಿಗಳು ಒಂದು ಇಲ್ಲ ಎರಡು ಹೆಣ್ಣುಮಗುವಾದರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಿಲ್ಲ. ಗಂಡುಮಗುವಿದ್ದರೆ ಮಾತ್ರ ಮೋಕ್ಷಸಿಗುವುದು ಎನ್ನುವ ಮೂಡನಂಬಿಕೆಯೂ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು ಎಂದರು.
ಹೆಣ್ಣು ಹತ್ತವರು ಮಗಳ ಮದುವೆ ಮಾಡುವಾಗ ಗಂಡಿನ ಆರ್ಥಿಕ ಪರಿಸ್ಥಿತಿ, ಏನು ಕೆಲಸ ಮಾಡುತ್ತಾರೆ ಎನ್ನುವುದನ್ನು ಮೊದಲು ವಿಚಾರಿಸುತ್ತಾರೆ.
ಡಾ.ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಜಯಪ್ರಕಾಶ್, ನಿವಾಸಿ ವೈದ್ಯಾಧಿಕಾರಿ ಆನಂದಪ್ರಕಾಶ್, ಡಾ.ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಹೆಚ್.ತಿಮ್ಮಣ್ಣ, ಜಿ.ಪಂ.ಸದಸ್ಯ ಆನಂದ್ ವೇದಿಕೆಯಲ್ಲಿದ್ದರು.
ಆಶಾ ಕಾರ್ಯಕರ್ತರು, ನರ್ಸಿಂಗ್ ವಿದ್ಯಾರ್ಥಿಗಳು ವಿಶ್ವಜನಸಂಖ್ಯಾದಿನಾಚರಣೆಯಲ್ಲಿ ಭಾಗವಹಿಸಿದ್ದರು.