ಚಿತ್ರದುರ್ಗ: ಕಳೆದ ಜನವರಿ 9 ರಿಂದ ಜಿಲ್ಲೆಯಲ್ಲಿ ಜರುಗಿದ ಜನಸ್ಪಂದನ ಸಭೆಗೆ 569 ಅರ್ಜಿಗಳು ಸ್ವೀಕೃತಗೊಂಡಿದ್ದು ಅವುಗಳಲ್ಲಿ 489 ಅರ್ಜಿಗಳು ವಿಲೇವಾರಿ ಆಗಿವೆ ಜನರ ನಿಜವಾದ ಸಮಸ್ಯೆಗಳನ್ನು ಅರಿತು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಬೇಕೆಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಬರುವ ಅರ್ಜಿಗಳನ್ನು ಅವರ ಇಲಾಖೆಗೆ ರವಾನಿಸಲಾಗಿದೆ. ಆದರೆ ಅಧಿಕಾರಿಗಳು ಇದಕ್ಕೆ ಜವಾಬ್ದಾರಿಯಿಂದ ನುಣಚಿಕೊಳ್ಳದೇ ಜನಸ್ಪಂದನ ಸಭೆಯಲ್ಲಿ ನೀಡುವ ಅರ್ಜಿಗಳಿಗೆ ಕಾಲಬದ್ಧ ಮಿತಿಯಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಅವರು ಸೂಚನೆ ನೀಡಿದರು.

ಸಭೆಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳಿಗೆ ಇಲ್ಲಿಂದ ಸ್ವೀಕೃತಿಯನ್ನು ನೀಡಲಾಗುತ್ತದೆ. ಇಲ್ಲಿಗೆ ಸಲ್ಲಿಸಲಾಗಿದೆ ನನಗೇನು ಸಂಬಂಧ ಎನ್ನುವ ರೀತಿಯಲ್ಲಿ ವರ್ತಿಸದೆ ತಮ್ಮ ಇಲಾಖೆಗಳಿಗೆ ಸಂಬಂಧಿಸಿಂತೆ ಯಾವುದೇ ಅರ್ಜಿಗಳು ಬೇರೆ ಇಲಾಖೆಗಳಿಂದಲೂ ಬಂದರೆ ಅದರ ಮೇಲೆ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದರು.

ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ ್ಲ 80 ಅರ್ಜಿಗಳು ಬಾಕಿಯಿದ್ದು ಯಾವ ಇಲಾಖೆಯಲ್ಲಿ ಹೆಚ್ಚು ಅರ್ಜಿಗಳು ಬಾಕಿ ಇವೆ ಅವುಗಳನ್ನು ಅದ್ಯತೆ ಮೇಲೆ ವಿಲೇಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಮಾರ್ಚ್ 13 ರಂದು ಜರುಗಿದ ಜನಸ್ಪಂದನ ಸಭೆಗೆ ನಗರ, ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಭೂಮಾಪನ ಇಲಾಖೆ, ಕೃಷಿ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಒಟ್ಟು 55 ಅರ್ಜಿಗಳು ಸಲ್ಲಿಕೆಯಾಗಿದ್ದು

ಅವುಗಳಿಗೆ ಸ್ವೀಕೃತಿ ಪತ್ರ ನೀಡಿ ಕಳುಹಿಸಿ ಕೊಡಲಾಗಿದೆ.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.