ಚಿತ್ರದುರ್ಗ: ಜಗತ್ತು ಹುಟ್ಟಿದಾಗಿನಿಂದ ಸಂಘರ್ಷಗಳು ಇವೆ. ಇವು ಅನಿವಾರ್ಯ. ಸೂರ್ಯೋದಯ, ಚಂದ್ರೋದಯ ಇದ್ದ ಹಾಗೆ ಸಂದರ್ಭಗಳು ಸಾಮಾನ್ಯವಾಗಿ ಘಟಿಸುತ್ತವೆಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀ ಮುರುಘಾ ಮಠ, ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಅಲ್ಲಮ ಪ್ರಭು ಸ್ಮರಣೆ ಮತ್ತು ವಸಂತ ಕವಿಗೋಷ್ಟಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಾನವ ಪರಿವರ್ತನಾ ಮುಖಿಯಾಗಬೇಕು. ಇದರ ನಡುವೆ ಅಂತರ್ಮುಖಿ ಸಾಧನೆ ಬೇಕು. ಅಲ್ಲಮ ಯಾವುದೇ ರೀತಿಯ ಢೋಂಗಿತನವನ್ನು ಒಪ್ಪುವುದಿಲ್ಲ. ಬಸವಣ್ಣನವರಿಗೆ ಚಿಕಿತ್ಸಕ ಹಾಗೂ ವಿಡಂಬನಾತ್ಮಕವಾಗಿದ್ದ ಅಲ್ಲಮನ್ನು ಸುಧಾರಿಸುವುದು ಕಷ್ಟಕರವಾಗಿತ್ತು. ಅಲ್ಲಮ ಅಷ್ಟು ಸುಲಭವಾಗಿ ವಿಚಾರಗಳನ್ನು ಒಪ್ಪುತ್ತಿರಲಿಲ್ಲ. ಅಲ್ಲಮನಲ್ಲಿ ಜಿಜ್ಞಾಸೆಗಳು ಯಾವಾಗಲೂ ಇದ್ದವು. ನಮ್ಮಲ್ಲಿ ಬಲಪಂಥೀಯ ಹಾಗೂ ಎಡಪಂಥೀಯ ಧೋರಣೆಗಳುಳ್ಳವರು ಇದ್ದಾರೆ. ವಿಚಾರಗಳಲ್ಲಿ ಒಬ್ಬರ ವಿಚಾರಗಳು ಒಬ್ಬರಿಗೆ ಹಿಡಿಸುವುದಿಲ್ಲ. ಅಂತಿಮವಾಗಿ ನಿಲ್ಲುವುದು ಎಡ ಪಂಥೀಯ ಧೋರಣೆ. ಅಲ್ಲಮರದು ಎಡ ಪಂಥೀಯ ಧೋರಣೆ. ವಿಶ್ವಕ್ಕೆ ಆಶಯವಾಗುವ ಸಿದ್ದಾಂತಗಳು ಕರ್ನಾಟಕದ ಬಸವ ತತ್ವದಲ್ಲಿವೆ. ಕರ್ನಾಟಕ ಪ್ರಪಂಚದತ್ತ ಬೆಳಕು ಚೆಲ್ಲುತ್ತಿವೆ ಎಂದರು.

ಡಾ. ರಂಜಾನ್ ದರ್ಗಾ : ಎಲ್ಲದನ್ನು ಒಳಗೊಂಡ ಬಹುದೊಡ್ಡ ಪರಿಕಲ್ಪನೆ ಬಸವಧರ್ಮದ್ದು, ನಿಸರ್ಗದ ಸ್ಥಿತಿ, ಜೀವ ಜಗತ್ತಿನ ಬಗ್ಗೆ ಮೊದಲು ಮಾತನಾಡಿದವರು. ಬುದ್ದ ಮತ್ತು ಬಸವಣ್ಣ, ವಸಂತ ಋತುವಿನ ಆನಂದದ ಹಿನ್ನೆಲೆಯ ಜವಾಬ್ದಾರಿಯನ್ನು ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ. ಜೀವ ಜಲದ ಬಗ್ಗೆ ಹೆಚ್ಚು ತಿಳಿಸಿಕೊಟ್ಟವರು ಬಸವಣ್ಣನವರು. ನಿಸರ್ಗವೇ ಬಹುದೊಡ್ಡ ಆಸ್ತಿ. ನಿತ್ಯ ಹರಿದ್ವರ್ಣದ ೧೨ ಕಾಡುಗಳಲ್ಲಿ ಭಾರತದಲ್ಲಿ ೨ ಮಾತ್ರ ಇವೆ. ಒಂದು ಸಹ್ಯಾದ್ರಿ ಶ್ರೇಣಿ ಮತ್ತೊಂದು ಹಿಮಾಲಯ ಶ್ರೇಣಿ. ವಸಂತ ಇದು ಪರಿವರ್ತನೆಯ ಕಡೆ ಸಾಗಬೇಕು.
ಪ್ರೊ. ವೀರಣ್ಣ ರಾಜೂರ : ಶರಣರು ಮಹಾ ಕವಿಗಳು, ಅಲ್ಲಮ, ಬಸವ, ಅಕ್ಕಮಹಾದೇವಿ ಮೊದಲಾದ ಶರಣರು ದೊಡ್ಡ ಕವಿಗಳು. ಲೌಕಿಕ ಮತ್ತು ಪಾರಮಾರ್ಥಿಕ ಚಿಂತನೆಗಳನ್ನು ಸುಂದರವಾಗಿ ಬರೆದರು. ಮೊದಲಿನಿಂದಲು ಅನೇಕ ರೀತಿಯ ಮೌಲ್ಯಗಳನ್ನು ಅಳವಡಿಸಿಕೊಂಡು ಕವಿಗಳು ಬರೆದಿದ್ದಾರೆ. ಶರಣರು ಬದುಕಿನೊಳಗೆ ಅದ್ಭುತ ಬದಲಾವಣೆ ತರಲು ಶ್ರಮಿಸಿದರು. ಅದರಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಶರಣರು ಬದುಕಿನಲ್ಲಿರುವ ಸಮಸ್ಯೆಗಳನ್ನು ನೋಡಿದರು. ವಚನಗಳು ಕಾವ್ಯಗಳಾಗಿ ನಿಂತವು. ಬಸವಣ್ಣನವರ ದೃಷ್ಟಿಯಲ್ಲಿ ಕೂಡಲ ಸಂಗಮ ಎಂದರೆ ಸಮಾಜ. ಸಮಾಜಕ್ಕೆ ಯಾವುದೇ ರೀತಿಯ ಸಮಸ್ಯೆ, ಕೇಡು ಅಥವಾ ಹಾನಿಯಾಗಬಾರದು. ಅಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೆರೆಯಬೇಕು. ಕವಿಯಾಗಬೇಕಾದರೆ ಅವನಿಗೆ ಪ್ರತಿಭೆಇರಬೇಕು. ಹೊಸದನ್ನು ಹೇಳಬೇಕು. ಗುರುವಿನ ಮಾರ್ಗದರ್ಶನದ ಒಳಗೆ ಗುರುತಿಸಿಕೊಳ್ಳಬೇಕು. ನಿರಂತರ ಅಧ್ಯಯನಶೀಲರಾಗಬೇಕು ಎಂದರು.
ಕವಿಗೋಷ್ಟಿಯಲ್ಲಿ ಜಿ.ಎಸ್.ಉಜ್ಜಿನಪ್ಪ, ಶರೀಫಾ ಬಿ. ರೋಹಿಣಿ ಬಸವರಾಜ್, ಪಿ. ಜಗನ್ನಾಥ್, ಪಗಡಲ ಬಂಡೆ ನಾಗೇಂದ್ರಪ್ಪ, ಬಿಲ್ಲಳ್ಳಿ ಚಿತ್ರಲಿಂಗಪ್ಪ, ಶಿವಾನಂದಮೂರ್ತಿ, ಮಮತ ತಿಪ್ಪಣ್ಣ, ಎಂ.ಡಿ.ಗೌರವ್, ಲೋಕೇಶ್ ಪಲ್ಲವಿ ಮೊದಲಾದವರು ಕವನ ವಾಚನಮಾಡಿದರು. ಕಾರ್ಯಕ್ರಮಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಣ ಸ್ವಾಮಿಗಳು, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ. ಈ.ಚಿತ್ರಶೇಖರ್, ಪರಮಶಿವಯ್ಯ, ಡಾ. ಗೌರಮ್ಮ, ದೊರೆಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.