ಚಿತ್ರದುರ್ಗ: ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದಿದ್ದರೆ ನಮ್ಮ ರಾಷ್ಟ್ರದಲ್ಲಿ ನಮ್ಮ ದೇವರುಗಳನ್ನು ಪೂಜಿಸುವ ಅವಕಾಶವೇ ಸಿಗುತ್ತಿರಲಿಲ್ಲ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಹೇಳಿದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು, ಜಿಲ್ಲಾ ಘಟಕದ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ೩೯೨ ನೇ ಜಯಂತಿ, ವಿದ್ಯಾರ್ಥಿ ವೇತನ, ವೃದ್ದರಿಗೆ ಹಾಗೂ ವಿಧವೆಯರಿಗೆ ಸಹಾಯಧನ ವಿತರಣೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಪರಾಕ್ರಮಿ ಶಿವಾಜಿ ಮಹಾರಾಜರು ಇಲ್ಲದೆ ಹೋಗಿದ್ದರೆ ನಮ್ಮ ದೇಶದ ದೇವಾಲಯಗಳೆಲ್ಲಾ ಮಸೀದಿಗಳಾಗುತ್ತಿದ್ದವು. ವಿಶ್ವನಾಥ ದೇವಾಲಯದ ಮುಂದೆ ದೊಡ್ಡ ಮಸೀದಿಯಿದೆ. ಇದಕ್ಕೆ ಹಿಂದುಗಳ ನಿರ್ಲಕ್ಷೆಯೇ ಕಾರಣ ಎನ್ನುವುದು ಗೊತ್ತಾಗುತ್ತದೆ. ಯುದ್ದದಲ್ಲಿ ಅನೇಕ ಬಾರಿ ಶಿವಾಜಿ ಸೋತರೂ ಕೂಡ ಹಿಡಿದ ಪಟ್ಟು ಬಿಡಲಿಲ್ಲ. ಕ್ಷತ್ರಿಯರು ಎಂದಿಗೂ ತಲೆಬಾಗುವವರಲ್ಲ. ಎದೆ ಕೊಟ್ಟು ಯುದ್ದಕ್ಕೆ ನಿಲ್ಲುವವರು ಎಂದು ಗುಣಗಾನ ಮಾಡಿದರು.

ಸಂಘಟನೆ ಎನ್ನುವುದು ಸುಲಭದ ಕೆಲಸವಲ್ಲ. ಅಂತಹ ಕಾಲದಲ್ಲಿ ಶಿವಾಜಿ ಮಹಾರಾಜ ಹಳ್ಳಿ ಜನರನ್ನೆಲ್ಲಾ ಒಂದುಗೂಡಿಸಿ ಸೈನ್ಯ ಕಟ್ಟುತ್ತಾನೆ. ಹಿಂದಿನ ಕಾಲದಲ್ಲಿ ಹಿಂದೆ ಗುರು ಮುಂದೆ ಗುರಿಯಿತ್ತು. ಈಗ ಅವೆರಡು ಇಲ್ಲದಂತಾಗಿದೆ. ಶಿವಾಜಿ ಪ್ರಜೆಗಳನ್ನು ದೇವರಂತೆ ಕಾಣುತ್ತಿದ್ದ ಎಂದಿಗೂ ಸಾಮಾನ್ಯರಂತೆ ನೋಡುತ್ತಿರಲಿಲ್ಲ. ಛತ್ರಿಪತಿ ಎನ್ನಿಸಿಕೊಳ್ಳುವುದು ಸುಲಭವಲ್ಲ. ಧೀರ, ಪರಾಕ್ರಮಿಯಾಗಿದ್ದ ಆತನಲ್ಲಿ ನೈತಿಕತೆಯಿತ್ತು. ಹಗೆತನವಿರಲಿಲ್ಲ. ಉದಾತ್ತನಾಗಿದ್ದ. ಮರಾಠರಲ್ಲಿ ಸಂಪತ್ತಿಗಿಂತ ಗುರುಭಕ್ತಿ ಜಾಸ್ತಿ ಎಂದರು.
ಶಿವಾಜಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಗೌರ್‍ನಿಂಗ್ ಕೌನ್ಸಿಲ್ ಚೇರ್ಮನ್ ವಿ.ಎ.ರಾಣೋಜಿರಾವ್‌ಸಾಠೆ ಮೊಘಲ್ ಸಾಮ್ರಾಜ್ಯಶಾಹಿಗಳಿಂದ ದೇಶವನ್ನು ರಕ್ಷಿಸಿಕೊಳ್ಳಲು ಛತ್ರಪತಿ ಶಿವಾಜಿ ಮಹಾರಾಜರು ಸಾಕಷ್ಟು ಹೋರಾಡಿದ್ದಾರೆ. ಎಂಟನೆ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರಂತ ಧೈರ್ಯ ಪರಾಕ್ರಮಿಗಳನ್ನು ಹೊಂದಿರುವ ಜನಾಂಗ ನಮ್ಮದು. ಆರ್ಥಿಕ, ಶೈಕ್ಷಣಿ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ನಮ್ಮ ಸಮಾಜ ಮೊದಲು ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.

ರಾಜ್ಯದಲ್ಲಿ ೩೫ ಲಕ್ಷದಷ್ಟಿದ್ದೆವೆ. ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಬೇಕಾಗಿದೆ. ಮೂವತ್ತು ಜಿಲ್ಲೆಗಳಲ್ಲಿ ನಮ್ಮ ಜನಾಂಗವನ್ನು ಸಂಘಟಿಸುತ್ತಿದ್ದೇವೆ. ಮರಾಠ ಸಮಾಜಕ್ಕೆ ಗುರುಪೀಠ ಮುಖ್ಯ. ವಿ.ವಿ.ಸಾಗರ ಬಳಿ ನಿವೇಶನ ನೀಡಲಾಗಿದೆ. ಅಲ್ಲಿ ಸಭಾಂಗಣ ಕಟ್ಟೋಣ. ನಮ್ಮ ಜನಾಂಗದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಬೇಕಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ. ಬೆಂಗಳೂರಿನಲ್ಲಿ ಈಗಾಗಲೆ ೧೫೦ ಮಕ್ಕಳಿಗೆ ವಿದ್ಯಾರ್ಥಿನಿಲಯ ತೆರೆಯಲಾಗಿದೆ. ಮರಾಠ ಸಮಾಜವನ್ನು ಮೂರು ಬಿ.ಯಿಂದ ಎರಡು ಎ.ಗೆ ಸೇರ್ಪಡೆಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಎಸ್.ಸುರೇಶ್‌ರಾವ್‌ಸಾಠೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಖಜಾಂಚಿ ಟಿ.ಆರ್.ವೆಂಕಟರಾವ್ ಚವಾಣ್, ಪ್ರಧಾನ ಕಾರ್ಯದರ್ಶಿ ಜಿ.ಆರ್.ಹನುಮಂತರಾವ್ ಪನ್ನಾಳೆ, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಗೋಪಾಲರಾವ್ ಜಾಧವ್, ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‌ರಾವ್ ಜಾಧವ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾಭಾಯಿ ಗೋಪಾಲರಾವ್‌ಜಾಧವ್ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ನಾಗರಾಜ್‌ಬೇದ್ರೆ ಸೇರಿದಂತೆ ಕ್ಷತ್ರಿಯ ಮರಾಠ ಜನಾಂಗದ ಅನೇಕರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ, ವಿಧವಾ ವೇತನ, ವೃದ್ದಾಪ್ಯ ವೇತನ ಹಾಗೂ ಅಂಗವಿಕಲರ ವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.