ಚಿತ್ರದುರ್ಗ: ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಬಲಿಷ್ಟವಾಗಿರಬೇಕಾದರೆ ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿದರೆ ದೇಶ ಅಭಿವೃದ್ದಿಯತ್ತ ಸಾಗಲು ಸಾಧ್ಯ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಹೇಳಿದರು.

ನೆಹರು ಯುವ ಕೇಂದ್ರ, ಚಂದ್ರೋದಯ ಸಾಂಸ್ಕøತಿಕ ಕಲಾ ಸಂಘ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ
ದಿವಂಗತ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ನೆರೆಹೊರೆ ಯುವ ಸಂಸತ್ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಶಿಕ್ಷಣದ ಜೊತೆಯಲ್ಲಿ ಸ್ವಚ್ಚತೆ ಹಾಗೂ ಮತದಾನದ ಕುರಿತು ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕಾಲ್ಕೆರೆ ಚಂದ್ರಪ್ಪ ಮಾತನಾಡುತ್ತ ಜನನಿ ಮತ್ತು ಜನ್ಮ ಭೂಮಿಗಳು ಸ್ವರ್ಗಕ್ಕಿಂತಲೂ ಮಿಗಿಲಾದವುಗಳು. ಅದರಂತೆ ಮತದಾನ ಎಂಬುದು ಕಲ್ಪವೃಕ್ಷವಿದ್ದಂತೆ ಹಾಗಾಗಿ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಗೆ ಮತ ಚಲಾಯಿಸಿ ಸಂವಿಧಾನದಡಿ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಜೀವನ ಹಸನು ಮಾಡಿಕೊಳ್ಳುವ ಶಕ್ತಿ ನಿಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿನಿಯರನ್ನು ಎಚ್ಚರಿಸಿದರು.

ಸಮಾಜ ಸೇವಕ ಹಾಗೂ ಡಿಜಟಲ್ ವಲ್ರ್ಡ್‍ನ ಮಾಲೀಕ ದಾದಾಪೀರ್ ಮಾತನಾಡಿ ದೇಶದಲ್ಲಿರುವ ನೂರ ಮೂವತ್ತು ಕೋಟಿಯಲ್ಲಿ ಶೇ.55 ರಷ್ಟು ಯುವ ಸಮೂಹವಿದೆ. ಭಾರತದ ಭವಿಷ್ಯ ನಿಮ್ಮ ಕೈಯಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕ/ಯುವತಿಯರು ಸಂಸತ್ ಪ್ರವೇಶಿಸುವಂತಾಗಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಯುವ ಜನಾಂಗ ಸ್ಪರ್ಧಿಸಲು ಹೆಚ್ಚಿನ ಅವಕಾಶ ಕೊಡಬೇಕು. ಜೊತೆಗೆ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ರಾಜಕೀಯ ಪ್ರವೇಶಿಸಿದರೆ ದೇಶದಲ್ಲಿನ ಅನೇಕ ಸಮಸ್ಯೆಗಳು ಪರಿಹಾರವಾಗಿ ಪ್ರಜಾಪ್ರಭುತ್ವದ ಆಶಯಗಳು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಬಿ.ಸಿ.ಎಂ.ಇಲಾಖೆ ಅಧಿಕಾರಿ ಬಿ.ರುದ್ರಮುನಿ, ಕೆ.ಕೆ.ಕಮಾನಿ, ಅಕ್ಷರ ದಾಸೋಹದ ಅಬ್ದುಲ್‍ಬಶೀರ್, ಹಾಸ್ಟೆಲ್ ಮೇಲ್ವಿಚಾರಕ ಶೇಖರ್, ಮೈಲಾರಲಿಂಗೇಶ್ವರ ನರ್ಸಿಂಗ್ ಕಾಲೇಜಿನ ಅಧೀಕ್ಷಕ ಎಂ.ಸಿ.ತಿಪ್ಪೇಸ್ವಾಮಿ, ಮೇಲ್ವಿಚಾರಕರುಗಳಾದ ದೀಪರಾಣಿ, ವೈಶಾಲಿ, ಆಶಾರಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.