ಚಿತ್ರದುರ್ಗ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಪ್ರೌಢಶಾಲೆ ಶಿಕ್ಷಕ ಹಾಗೂ ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಅವರನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಮಾನತುಗೊಳಿಸಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆ ನಿಮಿತ್ಯ ಗೌರಸಮುದ್ರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಹುಲುಗಣ್ಣ ಹಾಗೂ ಚಳ್ಳಕೆರೆ ತಾಲ್ಲೂಕು ತಳಕು ಪೊಲೀಸ್ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಹೊನ್ನೂರ್‍ಸಾಬ್ ಅವರನ್ನು ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡದಲ್ಲಿ ನೇಮಿಸಿ, ಮಲ್ಲಸಮುದ್ರ ಚೆಕ್‍ಪೋಸ್ಟ್‍ನಲ್ಲಿ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಏ. 2 ರಂದು ರಾತ್ರಿ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹ ಶಿಕ್ಷಕ ಹುಲುಗಣ್ಣ ಹಾಗೂ ಹೆಡ್ ಕಾನ್‍ಸ್ಟೇಬಲ್ ಹೊನ್ನೂರ್‍ಸಾಬ್ ಅವರು ಕರ್ತವ್ಯ ನಿರ್ವಹಿಸದೆ, ಮಲಗಿರುವುದು ಕಂಡುಬಂದಿದೆ.

ಅಲ್ಲದೆ ಶಿಕ್ಷಕ ಹುಲುಗಣ್ಣ ಅವರು, ತಮಗೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವುದಾಗಿ ಸುಳ್ಳು ಹೇಳಿ, ಚುನಾವಣಾ ಕರ್ತವ್ಯಕ್ಕೆ ಈ ಹಿಂದೆಯೂ ಗೈರು ಹಾಜರಾಗಿದ್ದರು. ಆದರೆ ಹುಲುಗಣ್ಣ ಅವರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿಲ್ಲ ಎಂಬುದಾಗಿ ಮೊಳಕಾಲ್ಮೂರು ಬಿಇಒ ವರದಿ ಸಲ್ಲಿಸಿದ್ದರು. ಎಸ್‍ಎಸ್‍ಟಿ ತಂಡದವರು ಸಮಯದ ಅವಧಿಯಲ್ಲಿ ಕರ್ತವ್ಯದಲ್ಲಿ ಎಚ್ಚರ ವಹಿಸಿ ಕಾರ್ಯ ನಿರ್ವಹಿಸಬೇಕು. ಚೆಕ್‍ಪೋಸ್ಟ್ ಮೂಲಕ ಹಾದುಹೋಗುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವುದು ಇವರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಈ ಇಬ್ಬರು ನೌಕರರು ಚುನಾವಣಾ ಕರ್ತವ್ಯ ನಿರ್ವಹಿಸದೆ, ಕರ್ತವ್ಯದ ಅವಧಿಯಲ್ಲಿ ನಿದ್ರೆ ಮಾಡಿ, ಕರ್ತವ್ಯ ಲೋಪವೆಸಗಿದ್ದಲ್ಲದೆ, ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ತೋರಿರುವುದರಿಂದ ಸಹ ಶಿಕ್ಷಕ ಹುಲುಗಣ್ಣ ಹಾಗೂ ಹೆಡ್ ಕಾನ್‍ಸ್ಟೇಬಲ್ ಹೊನ್ನೂರ್‍ಸಾಬ್ ಅವರನ್ನು

ಪ್ರಜಾ ಪ್ರತಿನಿಧಿ ಕಾಯ್ದೆ 1951 ರಲ್ಲಿನ ಕಲಂ 134 ಮತ್ತು ಕೆಸಿಎಸ್‍ಆರ್ ನಿಯಮ 10(8)(2) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಅಮಾನತು ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡುವಂತಿಲ್ಲ ಹಾಗೂ ನಿಲಂಬನಾ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.