ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 03 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 80 ಕ್ಕೆ ಏರಿಕೆಯಾದಂತಾಗಿದೆ.
ಗುರುವಾರದಂದು ಜಿಲ್ಲೆಯ ಚಳ್ಳಕೆರೆಯಲ್ಲಿ 61 ವರ್ಷದ ವ್ಯಕ್ತಿ, ಹಿರಿಯೂರಿನ 09 ವರ್ಷದ ಬಾಲಕಿ ಹಾಗೂ ಹೊಳಲ್ಕೆರೆಯ 55 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.  ಇದೀಗ ಶುಕ್ರವಾರದ ವರದಿಯಲ್ಲಿ ಮತ್ತೆ 03 ಜನರಿಗೆ ಸೋಂಕು ದೃಢಪಟ್ಟಿದೆ.  ರಾಂಪುರದ 12 ವರ್ಷದ ಬಾಲಕಿ, ಚಳ್ಳಕೆರೆಯ 55 ವರ್ಷದ ಮಹಿಳೆ ಹಾಗೂ ಹಿರಿಯೂರಿನ 13 ವರ್ಷದ ಬಾಲಕಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ.
ಶುಕ್ರವಾರ ಒಟ್ಟು 66 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 59 ಜನರ ವರದಿ ನೆಗೆಟಿವ್ ಬಂದಿದೆ.  ಇನ್ನೂ 04 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.
ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 19, ಹಿರಿಯೂರು ತಾಲ್ಲೂಕು ಧರ್ಮಪುರದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ 11, ಭರಮಸಾಗರ-04, ಮೊಳಕಾಲ್ಮೂರು ತಾಲ್ಲೂಕು ರಾಂಪುರದಲ್ಲಿ 03 ಹಾಗೂ ಹೊಸದುರ್ಗ ತಾಲ್ಲೂಕು ಬೆಲಗೂರಿನ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ 01 ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಜಿಲ್ಲೆಯಲ್ಲಿ 375 ಜನ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ.  ಈವರೆಗೆ 5236 ಜನರ ಮಾದರಿ ಸಂಗ್ರಹಿಸಲಾಗಿದ್ದು, 4987 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 167 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.