ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 08 ವಿಧಾನಸಭಾ ಕ್ಷೇತ್ರಗಳಲ್ಲಿ ಏ. 18 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟಾರೆ ಶೇ. 70. 73 ರಷ್ಟು ಮತದಾನ ನಡೆದಿದ್ದು, ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಮತದಾನ ಮಾಡಿರುವುದು ಕಂಡುಬಂದಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದೆ, ಶಾಂತಿಯುತವಾಗಿ ಮತದಾನ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ನೆಮ್ಮದಿಯನ್ನುಂಟು ಮಾಡಿದೆ. ಪಂಜಯ್ಯನಹಟ್ಟಿ ಮತ್ತು ಓಬಣ್ಣನಹಳ್ಳಿ ಗ್ರಾಮಗಳಲ್ಲಿ ಮಾತ್ರ ಮತದಾನಕ್ಕೆ ಬಹಿಷ್ಕರಿಸಿದ್ದು ವರದಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗಿಂತ ಪುರುಷ ಮತದಾನ ಪ್ರಮಾಣ ಹೆಚ್ಚಾಗಿರುವುದು ದಾಖಲಾಗಿದೆ. ಮಹಿಳಾ ಮತದಾನ ಪ್ರಮಾಣ ಶೇ. 69. 29 ಇದ್ದರೆ, ಪುರುಷರ ಮತದಾನ ಶೇ. 72. 15 ರಷ್ಟು ಆಗಿದೆ. ಉಳಿದಂತೆ ಲೈಂಗಿಕ ಅಲ್ಪಸಂಖ್ಯಾತರ ಮತದಾರರ ಪೈಕಿ ಶೇ. 10. 81 ರಷ್ಟು ಮಾತ್ರ ಮತ ಚಲಾಯಿಸಿದ್ದು, ಕಂಡುಬಂದಿದೆ.

ಲೋಕಸಭಾ ಕ್ಷೇತ್ರದ 2161 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು 1760111 ಮತದಾರರ ಪೈಕಿ 1244940 ಮತದಾರರು ಮತದಾನ ಮಾಡಿದ್ದು, 641601 ಪುರುಷರು, 603327 ಮಹಿಳೆಯರು ಮತ್ತು 12 ಇತರೆ ಮತದಾರರು ಮತ ಚಲಾಯಿಸಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಕಳೆದ 2014 ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯ ಅಂಕಿ-ಅಂಶಗಳನ್ನು ಹೋಲಿಸಿದಾಗ ಕ್ಷೇತ್ರದಲ್ಲಿ ಸುಮಾರು ಶೇ. 5 ರಷ್ಟು ಮತದಾನ ಪ್ರಮಾಣ ಏರಿಕೆಯಾಗಿರುವುದು ಪ್ರಮುಖ ಅಂಶವಾಗಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 284 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 232589 ಮತದಾರರ ಪೈಕಿ 169506 ಜನ ಮತ ಚಲಾಯಿಸಿದ್ದು, ಶೇ. 72.88 ರಷ್ಟು ಮತದಾನ ನಡೆದಿದೆ. ಈ ಕ್ಷೇತ್ರದಲ್ಲಿ 687383 ಪುರುಷರು ಹಾಗೂ 82123 ಮಹಿಳೆಯರು ಮತ ಚಲಾಯಿಸಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 259 ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ 211388 ಮತದಾರರ ಪೈಕಿ 152668 ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 72.22 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 77611 ಪುರುಷರು ಹಾಗೂ 75057 ಮಹಿಳೆಯರು ಮತದಾನ ಮಾಡಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ 283 ಮತಗಟ್ಟೆಗಳಲ್ಲಿ ಮತದಾನವಾಗಿದ್ದು, 253570 ಮತದಾರರ ಪೈಕಿ 172887 ಜನ ತಮ್ಮ ಸಂವಿಧಾನಾತ್ಮಕ ಮತದಾನ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಶೇ. 68.18 ರಷ್ಟು ಮತದಾನ ನಡೆದಿರುತ್ತದೆ. ಈ ಕ್ಷೇತ್ರದಲ್ಲಿ 88004 ಪುರುಷರು ಹಾಗೂ 84879 ಮಹಿಳೆಯರು ಮತ್ತು ಇತರೆ 04 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ 235621 ಮತದಾರರ ಪೈಕಿ 160984 ಜನ ಮತದಾನ ಮಾಡಿದ್ದು ಶೇ. 68.32 ರಷ್ಟು ಮತದಾನವಾದಂತಾಗಿದೆ. ಈ ಕ್ಷೇತ್ರದಲ್ಲಿ 83161 ಪುರುಷರು ಹಾಗೂ 77817 ಮಹಿಳೆಯರು ಮತ್ತು 06- ಇತರರು ಮತದಾನ ಮಾಡಿದ್ದಾರೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ 240 ಮತಗಟ್ಟೆಗಳಲ್ಲಿ ಮತದಾನ ನಡೆದು, 188566 ಮತದಾರರ ಪೈಕಿ 137539 ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಶೇ. 72.94 ರಷ್ಟು ಮತದಾನವಾಗಿದ್ದು, 70893 ಪುರುಷರು ಹಾಗೂ 66646 ಮಹಿಳೆಯರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 297 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು 227510 ಮತದಾರರ ಪೈಕಿ 165433 ಜನ ಮತ ಚಲಾಯಿಸಿದ್ದು, ಶೇ. 72.71 ರಷ್ಟು ಮತದಾನ ನಡೆದಿದೆ. ಈ ಕ್ಷೇತ್ರದಲ್ಲಿ 86927 ಪುರುಷರು ಹಾಗೂ 78506 ಮಹಿಳೆಯರು ಮತ ಚಲಾಯಿಸಿದ್ದಾರೆ.
ತುಮಕೂರು ಜಿಲ್ಲೆ ಸಿರಾ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ 213153 ಮತದಾರರ ಪೈಕಿ 158088 ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 74.17 ರಷ್ಟು ಕ್ಷೇತ್ರದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ 81558 ಪುರುಷರು ಹಾಗೂ 76530 ಮಹಿಳೆಯರು ಮತದಾನ ಮಾಡಿದ್ದಾರೆ.

ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ 246 ಮತಗಟ್ಟೆಗಳಲ್ಲಿ ಮತದಾನವಾಗಿದ್ದು, 197714 ಮತದಾರರ ಪೈಕಿ 127835 ಜನ ತಮ್ಮ ಸಂವಿಧಾನಾತ್ಮಕ ಮತದಾನ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಶೇ. 64.66 ರಷ್ಟು ಮತದಾನ ನಡೆದಿರುತ್ತದೆ. ಈ ಕ್ಷೇತ್ರದಲ್ಲಿ 66064 ಪುರುಷರು ಹಾಗೂ 61769 ಮಹಿಳೆಯರು ಮತ್ತು 02 ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.