ಚಿತ್ರದುರ್ಗ: ಬಂಡೆಗಲ್ಲು ಚಿತ್ರಗಳಿಗೆ ತನ್ನದೇ ಆದ ಪರಂಪರೆ ಇತಿಹಾಸವಿದೆ ಎಂದು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೋ(ಯುಜಿಸಿ) ಡೆಕ್ಕನ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಸ್ವಾಯತ್ತ ವಿದ್ಯಾಲಯ ಪುಣೆಯ ಡಾ.ಆರ್.ಮೋಹನ ತಿಳಿಸಿದರು.
ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಇವರುಗಳ ಸಹಯೋಗದೊಂದಿಗೆ ಐ.ಎಂ.ಎ.ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕದ ಪ್ರಾಕ್ಚಾರಿತ್ರಿಕ ಬಂಡೆಗಲ್ಲು ಚಿತ್ರಗಳು ಈಚಿನ ಅಧ್ಯಯನಗಳು ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬಂಡೆಗಲ್ಲುಗಳು ಎಂದಕೂಡಲೆ ಪರಂಪರೆ ಪೂರ್ವಕ್ಕೆ ಹೋಗುತ್ತದೆ. ಅಜಂತ, ಎಲ್ಲೋರ, ಬಾದಾಮಿ, ಗುಹಾಂತರ, ದೇವಾಲಯಗಳಲ್ಲಿರುವ ವರ್ಣರಂಜಿತ ಚಿತ್ರಗಳು ಕಣ್ಣಮುಂದೆ ಬರುತ್ತವೆ. ಶಿಲಾಯುಗ, ತಾಮ್ರಯುಗ, ಕಬ್ಬಿಣಯುಗ, ಇತಿಹಾಸ ಕಾಲ ಹೀಗೆ ನಾಲ್ಕು ಭಾಗಗಳನ್ನಾಗಿ ವಿಂಡಿಸಲಾಗಿದೆ. ಹದಿಮೂರು ಲಕ್ಷ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಮಾನವ ವಾಸವಾಗಿದ್ದ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಹೇಳಿದರು.
ಬಂಡೆಗಲ್ಲು ಚಿತ್ರಗಳು ನಲವತ್ತು ಸಾವಿರ ವರ್ಷಗಳ ಹಿಂದಕ್ಕೆ ಹೋಗುತ್ತದೆ. ೨೦೧೧ ರಿಂದ ೧೪ ರವರೆಗೆ ಬಾಗಲಕೋಟೆ, ಹುನಗುಂದ, ಐಹೊಳೆಯಲ್ಲಿ ಸಂಶೋಧನೆ ನಡೆಸಿದ್ದೇನೆ. ಬಂಡೆಗಲ್ಲು ವರ್ಣಚಿತ್ರಗಳು ಮನಷ್ಯನ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಬಂಡೆಗಲ್ಲು ಚಿತ್ರಗಳ ಅಧ್ಯಯನಕ್ಕೆ ಹಲವಾರು ಸಂಸ್ಥೆಗಳು ನೆರವು ನೀಡಿವೆ. ಕೆಲವೊಮ್ಮೆ ಸಂಶೋಧನೆ ಕೊರತೆಯಿಂದ ಒಳಗಿರುವ ಪ್ರತಿಭೆಯನ್ನು ಹೊರತರಲು ಆಗುವುದಿಲ್ಲ. ತಮಟಕಲ್ಲುಗುಡ್ಡ, ಬುರುಡೆಕಟ್ಟೆ, ಮೈಲಾರಹಟ್ಟಿ, ಸಂತೆಗುಡ್ಡ, ಗಂಜಿಕಟ್ಟೆ, ಪಂಡರಹಳ್ಳಿ ತಣಿಗೆಕಲ್ಲು, ಬ್ರಹ್ಮಗಿರಿ, ಸೊಲ್ಲಾಪುರ, ಕವಾಡಿಗರಹಟ್ಟಿ ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ೪೬ ಕ್ಕೂ ಹೆಚ್ಚು ಬಂಡೆಗಲ್ಲು ಚಿತ್ರಗಳಿವೆ. ರಾಜ್ಯದಲ್ಲಿ ಕಲ್ಲಿನ ಕ್ವಾರಿಗಳಂತೂ ಎಲ್ಲೆಂದರಲ್ಲಿ ತಲೆಎತ್ತಿವೆ. ಮರಳಿಗೆ ಅಭಾವವಾಗಿರುವುದರಿಂದ ಕಲ್ಲುಗಳನ್ನು ಕಡಿದು ನುಣ್ಣಗೆ ಮರಳು ರೀತಿಯಲ್ಲಿ ಸಿದ್ದಪಡಿಸಿ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ಗುಡ್ಡಗಳು ಕರಗುತ್ತಿರುವುದು ನೋವಿನ ಸಂಗತಿ. ಸಂಶೋಧವರು ಗುಡ್ಡಗಳನ್ನು ದಾಖಲಿಸಿ ಪೂರ್ವಜರ ಇತಿಹಾಸಗಳನ್ನು ಉಳಿಸಬೇಕಾಗಿದೆ. ಬಾದಾಮಿ ಶೈಲಿಯ ಮನಷ್ಯ ವರ್ಣಚಿತ್ರಗಳು ನನ್ನ ಸಂಶೋಧನೆಯಲ್ಲಿ ದೊರಕಿವೆ ಎಂದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್, ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್‌ತೆಲಗಾವಿ, ಸಾಹಿತಿ ಬಿ.ಎಲ್.ವೇಣು, ಶ್ರೀಶೈಲ ಆರಾಧ್ಯ, ವಿಶ್ರಾಂತ ಪ್ರಾಚಾರ್ಯರಾದ ಲಿಂಗಪ್ಪ, ಡಾ.ರಾಮಚಂದ್ರನಾಯಕ, ವೀರಣ್ಣ, ಡಿ.ಗೋಪಾಲಸ್ವಾಮಿ ನಾಯಕ, ಉಪನ್ಯಾಸಕ ಸಿ.ಬಿ.ಶೈಲ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.